ಮೈಸೂರು,ಅಕ್ಟೋಬರ್,8,2026 (www.justkannada.in): ದಸರಾ ಮಹೋತ್ಸವ 2026ರ ಪ್ರಯುಕ್ತ “ಪ್ರಜಾಪ್ರಭುತ್ವದ ಹಬ್ಬ” ವಿಷಯಾಧರಿತ ಪರಿಕಲ್ಪನೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಅಕ್ಟೋಬರ್ 11 ರಿಂದ 21 ರವರೆಗೆ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲಾಗುತ್ತಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರಾದ ರೂಪಶ್ರೀ ಕೆ.ಎನ್ ಅವರು ತಿಳಿಸಿದರು.
ನಗರದ ಕರ್ಜನ್ ಪಾರ್ಕ್ ಡಾ. ಎಂ. ಹೆಚ್. ಮರೀಗೌಡ ಸಭಾಂಗಣದಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿದ ರೂಪಶ್ರೀ ಕೆ.ಎನ್ ಅವರು, ಅಕ್ಟೋಬರ್ 11 ರಂದು ಬೆಳಿಗ್ಗೆ 12.30 ಗಂಟೆಗೆ ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫಲಪುಷ್ಪ ಪ್ರದರ್ಶನವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ 2 ಲಕ್ಷ ಕೆಂಪು ಗುಲಾಬಿ 4 ಸಾವಿರ ಸೇವಂತಿಗೆ ಹಾಗೂ 25 ಸಾವಿರ ಗ್ರೀನ್ ಫೋಲಿಯಜ್ ಗಳನ್ನು ಬಳಸಿ ವಿಧಾನಸೌಧ ಮಾದರಿಯ ಪುಷ್ಪ ಪರಿಕಲ್ಪನೆಯನ್ನು ಗಾಜಿನಮನೆಯಲ್ಲಿ ನಿರ್ಮಿಸಲಾಗಿದೆ, ಗಾಜಿನಮನೆ ಹೊರಗಡೆ ಚಿಕ್ಕ ಗಡಿಯಾರ ಮಾದರಿಯ ಪುಷ್ಪ,ನಾಲ್ವಡಿ ಕೃಷ್ಣರಾಜ ಒಡೆಯರ್ ಪುಷ್ಪಕೃತಿ, ಪ್ರಜಾಪ್ರಭುತ್ವದ ಮೂರು ಸ್ತಂಭಗಳು, ಮತದಾನ ಪೆಟ್ಟಿಗೆ ಮತ್ತು ವಿದ್ಯುನ್ಮಾನ ಮತಯಂತ್ರಗಳು ಹಾಗೂ ನನ್ನ ಮತ – ನನ್ನ ಹಕ್ಕು – ನನ್ನ ಹೊಣೆ ಘೋಷವಾಕ್ಯದೊಂದಿಗೆ ಮತದಾನ ಜಾಗೃತಿ ಫಲಪುಷ್ಪ ಪ್ರತಿಕೃತಿ ಸೇರಿದಂತೆ ಹಲವಾರು ಪುಷ್ಪ ಪ್ರದರ್ಶನಗಳು ಪ್ರವಾಸಿಗರನ್ನು ಆಕರ್ಷಣೆ ಮಾಡಲಿದೆ ಎಂದು ತಿಳಿಸಿದರು.
ಪುಷ್ಪ ಮೇಳ ಮತ್ತು ಸಸ್ಯತೋಟ: ನಗರದ ಲಿಂಗಾಂಬುದಿ ಸಸ್ಯ ಶಾಸ್ತ್ರೀಯ ತೋಟದಲ್ಲಿಯೂ ಕೂಡ ನಾಡಹಬ್ಬ ಮೈಸೂರು ದಸರಾ ಆಚರಣೆ ಪ್ರಯುಕ್ತ “ಪುಷ್ಪ ಮೇಳ ಮತ್ತು ಸಸ್ಯತೋಟ ಭೇಟಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅ.11 ರಂದು ಮಧ್ಯಾಹ್ನ 1 ಗಂಟೆಗೆ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಪ್ರವೇಶ ದರ: ವಯಸ್ಕರು 60 ರೂ. ಮಕ್ಕಳು (6-12ವರ್ಷ) 30 ರೂ. ಹಾಗೂ ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಪ್ರವೇಶ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನವೀನ್ ಸಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ್ ಆರ್, ರಂಗಸಮುದ್ರ ತೋಟಗಾರಿಕೆ ಉಪನಿರ್ದೇಶಕರಾದ ವಿಜಯೇಂದ್ರ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಿಲಾ,ಹಿರಿಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಸೇರಿದಂತೆ ಇತರರು ಇದ್ದರು.






