ಬೆಂಗಳೂರು, ಅಕ್ಟೋಬರ್,8,2026 (www.justkannada.in): ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಹಿರಂಗವಾಗಿವೆ.
ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಹಾಗೂ ಕೆಪಿಎಸ್ ಸಿ ಸದಸ್ಯೆ ಗೀತಾ ಬಂಧನದ ಬಳಿಕ ಇಡಿ ಮಾಧ್ಯಮ ಪ್ರಕಟಣೆಯೊಂದನ್ನ ಹೊರಡಿಸಿದ್ದು, ಅಂದು ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಡೆಯಿಂದ ಶಿವಶಂಕರಪ್ಪ ಸಾಹುಕಾರ್, ಗೀತಾ ಅವರು ಪರೀಕ್ಷೆ ಮುಂಚಿತವಾಗಿಯೇ 80 ಪ್ರಶ್ನೆಗಳ ಉತ್ತರಗಳನ್ನು ಪಡೆದುಕೊಂಡು ನೇರವಾಗಿ ಅಭ್ಯರ್ಥಿಗಳ ಜೊತೆ ಡೀಲ್ ಗೆ ಮಾಡಿಕೊಂಡಿದ್ದು ತನಿಖೆ ವೇಳೆ ಬಹಿರಂಗವಾಗಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಇಡಿಯು, ಪ್ರಶ್ನೆಪತ್ರಿಕೆ, ಕೀ ಉತ್ತರ ಸೋರಿಕೆ ಮಾಡಿದ್ದಾರೆ, 1:3 ಮೆರಿಟ್ ನಲ್ಲಿ ಸೋರಿಕೆ ಮಾಡಿ ಹಣ ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆ ಒಂದು ದಿನ ಮುಂಚಿತವಾಗಿ ಕೀ ಉತ್ತರ ನೀಡಲಾಗಿತ್ತು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 20 ಲಕ್ಷದಿಂದ 40 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂಬ ಅಂಶ ಬಯಲಾಗಿದೆ.
ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕಡೆಯಿಂದ ಬಿ.ವಿ ಗೀತಾ ಮೊದಲ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನ ಪಡೆದುಕೊಂಡಿದ್ದಾರೆ. ಬಳಿಕ ಗೀತಾ ಒಬ್ಬ ಅಭ್ಯರ್ಥಿಯಿಂದ ಡೀಲ್ ಮಾಡಿಕೊಂಡಿದ್ದರು. 40 ಲಕ್ಷದಲ್ಲಿ 20 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಡೆದಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಸಹ ಅಭ್ಯರ್ಥಿ ಜೊತೆ 20 ಲಕ್ಷಕ್ಕೆ ಡೀಲ್ ಮಾಡಿಕೊಂಡು ಮುಂಗಡವಾಗಿ 10 ಲಕ್ಷ ರೂ. ಪಡೆದಿದ್ದಾರೆ. ಹೀಗೆ ಒಟ್ಟು 6 ಅಭ್ಯರ್ಥಿಗಳ ಜೊತೆ ಇಬ್ಬರು ಡೀಲ್ ಮಾಡಿಕೊಂಡಿದ್ದರು ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾರನ್ನ ಬಂಧಿಸಲಾಗಿದ್ದು ಇವರಿಬ್ಬರನ್ನ PMLA ಪ್ರಕರಣಗಳ ವಿಶೇಷ ನ್ಯಾಯಾಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಇಬ್ಬರನ್ನೂ 14 ದಿನಗಳ ED ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ ಎಂದು ಇಡಿ ತಿಳಿಸಿದೆ.






