ಮೈಸೂರು,ಅಕ್ಟೋಬರ್,5,2026 (www.justkannada.in): ಮೈಸೂರು ದಸರಾ ಜಂಬೂಸವಾರಿಯಲ್ಲಿ ಕಳೆದ ಆರು ವರ್ಷಗಳಿಂದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆಯಾಗಿ ಭಾಗವಹಿಸುತ್ತಿದ್ದು ಇಂದು ಅರಮನೆ ಆವರಣದಲ್ಲಿ ಆತನಿಗೆ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಲಾಯಿತು.
ಈ ಮಧ್ಯೆ ಅರಮನೆ ಪ್ರವೇಶಿಸಿದ ಅಭಿಮನ್ಯುವಿಗೆ ಅಭಿಮಾನಿಗಳು.ವಿಶೇಷ ಪೇಟವನ್ನು ಉಡುಗೊರೆಯಾಗಿ ನೀಡಿದ್ದು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಮಾಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿಯ ಪೇಟ ಇದಾಗಿದೆ.
ಸುಮಾರು 6 ರಿಂದ 8 ಕೆಜಿ ತೂಕವಿರುವ ಈ ಪೇಟವನ್ನು ಸಂಪ್ರದಾಯಕವಾಗಿ ಪೂಜೆ ಸಲ್ಲಿಸಿದ ಬಳಿಕ ಅಭಿಮನ್ಯು ಆನೆಗೆ ಧಾರಣೆ ಮಾಡಲಾಯಿತು. ಈ ಮೂಲಕ ಅಭಿಮನ್ಯು ಅತ್ಯಾಕರ್ಷಕವಾದ ಪೇಟದಲ್ಲಿ ಕಂಗೊಳಿಸಿದನು.
ಅಭಿಮನ್ಯು ಇಲ್ಲದೇ ದಸರಾ ಇಲ್ಲ ಎಂಬಂತಾಗಿದೆ.
ಅಭಿಮನ್ಯುವಿನ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ಅಭಿಮನ್ಯು ಇಲ್ಲದೇ ದಸರಾ ಇಲ್ಲ ಎಂಬಂತಾಗಿದೆ. ಅಂತಿಮವಾಗಿ ಅಭಿಮನ್ಯು ದಸರಾಗೆ ಬಂದಿದ್ದಾನೆ. ಅಭಿಮನ್ಯುವನ್ನು ಸರ್ಕಾರ ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಾನು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ ಎಂದರು.
ಅಭಿಮನ್ಯುವಿಗೆ ತಾಲೀಮಿನ ಅವಶ್ಯಕತೆ ಇಲ್ಲ.
ಡಿಸಿಎಫ್ ಡಾ. ಪ್ರಭುಗೌಡ ಮಾತನಾಡಿ, ಸರ್ಕಾರ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. ಇಂದು ಆತನಿಗೆ ಪೂಜೆ ಸಲ್ಲಿಸಿ ಸ್ವಾಗತ ಮಾಡಿದ್ದೇವೆ. ಅಭಿಮನ್ಯುವಿಗೆ ತಾಲೀಮಿನ ಅವಶ್ಯಕತೆ ಇಲ್ಲ. ಆತ ಸದ್ದು ಗದ್ದಲಗಳಿಗೆ ಹೊಂದಿಕೊಂಡಿದ್ದಾನೆ. ಆದರೂ ನಾಳೆಯಿಂದ ತಾಲೀಮಿನಲ್ಲಿ ಅಭಿಮನ್ಯು ಭಾಗಿಯಾಗುತ್ತಾನೆ. ಅಕ್ಟೋಬರ್ 7, 9, 12ರಂದು ಕುಶಾಲತೋಪು ಸಿಡಿಸುವ ತಾಲೀಮು ಮಾಡುತ್ತೇವೆ. ಸಾರ್ವಜನಿಕರು ಆನೆಗಳಿಂದ ಅಂತರ ಕಾಯ್ದುಕೊಂಡು ಆನೆಗಳ ವೀಕ್ಷಣೆ ಮಾಡಬೇಕು. ಆನೆಗಳ ಸನಿಹಕ್ಕೆ ಯಾರು ಬರಬೇಡಿ ಎಂದು ತಿಳಿಸಿದರು.






