ಮೈಸೂರು,ಅಕ್ಟೋಬರ್,5,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ಮಧ್ಯೆ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿದೆ.
ಮೈಸೂರು ಅರಮನೆಯಲ್ಲಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್ಗೆ ಸಿಂಹಾಸನ ಸಜ್ಜಾಗುತ್ತಿದೆ.
ಧಾರ್ಮಿಕ ವಿಧಿವಿಧಾನಗಳ ಬಳಿಕ ಅರಮನೆಯ ಭದ್ರತಾ ಕೊಠಡಿಯಿಂದ ರತ್ನಖಚಿತ ಸಿಂಹಾಸನದ ಬಿಡಿಭಾಗಗಳನ್ನ ದರ್ಬಾರ್ ಹಾಲ್ ಗೆ ರವಾನೆ ಮಾಡಲಾಗಿದ್ದು ಒಟ್ಟು 13 ಬಿಡಿಭಾಗಗಳನ್ನ ಜೋಡಿಸಿ ಸಿಂಹಾಸನ ಸಿದ್ಧಗೊಳಿಸಲಾಗುತ್ತದೆ. 13 ಬಿಡಿಭಾಗಗಳಿಂದ ಸಿಂಹಾಸನಕ್ಕೆ ಮರುಜೋಡಿಸಲಾಗುತ್ತಿದೆ.
ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಿದ್ದು, ಸಿಂಹಾಸನ ಜೋಡಣಾ ಕಾರ್ಯ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಕ್ಟೋಬರ್ 11ರಿಂದ ಶರನ್ನವರಾತ್ರಿ ಆರಂಭವಾಗಲಿದ್ದು ಅಂದಿನಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.






