Friday, September 4, 2026

BDA Apartments

Home Cinema ಮೈಸೂರು ದಸರಾ 2026: ಯುವದಸರಾ ಉದ್ಘಾಟಿಸಲಿದ್ದಾರೆ ‘ಇಂಡಿಯನ್ ಮೈಕೆಲ್ ಜಾಕ್ಸನ್’ ಪ್ರಭುದೇವ

ಮೈಸೂರು ದಸರಾ 2026: ಯುವದಸರಾ ಉದ್ಘಾಟಿಸಲಿದ್ದಾರೆ ‘ಇಂಡಿಯನ್ ಮೈಕೆಲ್ ಜಾಕ್ಸನ್’ ಪ್ರಭುದೇವ

ಮೈಸೂರು,ಸೆಪ್ಟಂಬರ್,4,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಬಾರಿಯ ಯುವದಸರಾ ಕಾರ್ಯಕ್ರಮಕ್ಕೆ ಖ್ಯಾತ ನಟ, ನೃತ್ಯ ನಿರ್ದೇಶಕ ಹಾಗೂ ನೃತ್ಯ ಕಲಾವಿದ ಪ್ರಭುದೇವ್ ಅವರನ್ನು ಆಹ್ವಾನಿಸಲಾಗಿದೆ.

ಮೈಸೂರಿನ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಯುವದಸರಾವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ‘ಇಂಡಿಯನ್ ಮೈಕೆಲ್ ಜಾಕ್ಸನ್’ ಎಂದೇ ಜನಪ್ರಿಯರಾಗಿರುವ ಪ್ರಭುದೇವ್ ಅವರಿಂದ ಯುವದಸರಾ ಉದ್ಘಾಟನೆ ಮಾಡಿಸುವ ಚಿಂತನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಯುವದಸರಾ ಕಾರ್ಯಾಧ್ಯಕ್ಷ ಸೋಮಶೇಖರ್, ಅರುಣ್ ಹಾಗೂ ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ್ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಯುವದಸರಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.

ಪ್ರಭುದೇವ್ ಅವರ ನೃತ್ಯ ಪ್ರದರ್ಶನ ಹಾಗೂ ಚಿತ್ರರಂಗದಲ್ಲಿನ ಜನಪ್ರಿಯತೆ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವದಸರಾ ಕಾರ್ಯಕ್ರಮದತ್ತ ಸೆಳೆಯುವ ನಿರೀಕ್ಷೆ ಮೂಡಿಸಿದೆ. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯುವ ಯುವದಸರಾ ಕಾರ್ಯಕ್ರಮವು ಸಂಗೀತ, ನೃತ್ಯ ಹಾಗೂ ಮನರಂಜನೆಯ ಮೂಲಕ ಯುವಜನರ ಗಮನ ಸೆಳೆಯುತ್ತಿದ್ದು, ಈ ಬಾರಿ ಪ್ರಭುದೇವ್ ಅವರಂತಹ ಜನಪ್ರಿಯ ಕಲಾವಿದರನ್ನು ವೇದಿಕೆಗೆ ಕರೆತರುವ ಪ್ರಯತ್ನಕ್ಕೆ ಮಹತ್ವ ಬಂದಿದೆ.

ಚೆನ್ನೈ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಯುವದಸರಾ ಕಾರ್ಯಕ್ರಮದ ರೂಪುರೇಷೆ ಹಾಗೂ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಪ್ರಭುದೇವ್ ಅವರಿಗೆ ಮಾಹಿತಿ ನೀಡಲಾಯಿತು. ಆಹ್ವಾನವನ್ನು ಸ್ವೀಕರಿಸಿರುವ ಪ್ರಭುದೇವ್ ಅವರ ಭಾಗವಹಿಸುವಿಕೆ ಕುರಿತು ಅಂತಿಮ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಪ್ರಭುದೇವ್ ಯುವದಸರಾ ಉದ್ಘಾಟಿಸಿದರೆ, 2026ರ ಮೈಸೂರು ದಸರಾ ಮಹೋತ್ಸವದ ಯುವದಸರಾಕ್ಕೆ ಮತ್ತಷ್ಟು ಮೆರುಗು ಬರಲಿದ್ದು, ಯುವಜನರಲ್ಲಿ ಕಾರ್ಯಕ್ರಮದ ನಿರೀಕ್ಷೆ ಹೆಚ್ಚಲಿದೆ.

Key words: Mysore Dasara 2026, ‘Indian Michael Jackson,  Prabhu Deva, Yuva Dasara