ಬೆಂಗಳೂರು, ಆಗಸ್ಟ್ ,13,2026 (www.justkannada.in): ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಸಂಬಂಧಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚನೆ ಮಾಡಲಾಗಿದೆ.
ಸಿಸಿಬಿ ದಾಳಿ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆಯಲ್ಲಿ ಮೊಬೈಲ್ ಪತ್ತೆ ಪ್ರಕರಣ ಕುರಿತು ತನಿಖೆ ನಡೆಸಿ ವರದಿ ನೀಡಲು ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನಲ್ಲಿ ಮೊಬೈಲ್ ಹೇಗೆ ಬಂತು? ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ಯ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದೆ. ಸ್ಥಳೀಯರಿಗೆ ಟವರ್ ಸಿಗದೆ ನಿತ್ಯ ಪರದಾಡುತ್ತಾರೆ. ಹೀಗಿರುವಾಗ ಜೈಲಿನ ಒಳಗೆ ಏರ್ ಟೆಲ್ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಏರ್ ಟೆಲ್ ಸಿಮ್ ಗಳು ಪತ್ತೆಯಾಗಿವೆ, ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಸಿಮ್ ಗಳು ಪತ್ತೆ ಆಗುತ್ತಿವೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
Key words: Mobile detection case, Prajwal Revanna, Barrack:, Team, investigation







