ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ: ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟನೆ

ನವದೆಹಲಿ, ಜುಲೈ, 27,2026 (www.justkannada.in):  ಮೇಕೆದಾಟು ಬಹು ಉದ್ದೇಶದ ಜಲಾಶಯ ಯೋಜನೆಗೆ ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.

ರಾಜ್ಯಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದರು.

ಉತ್ತರದಲ್ಲಿ, ಅಂತರರಾಜ್ಯ ನದಿ ಜಲ ವಿವಾದಗಳಿಗೆ ಸಂಬಂಧಿಸಿದ ಕಾನೂನು ಹಾಗೂ ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಪ್ರಕಾರ, ಮೇಕೆದಾಟು ಯೋಜನೆಗೆ ಕರ್ನಾಟಕವು ನೆರೆ ರಾಜ್ಯಗಳ ಪ್ರತ್ಯೇಕ ಅನುಮೋದನೆ ಅಥವಾ ಒಪ್ಪಿಗೆ ಪಡೆಯುವ ಯಾವುದೇ ಕಡ್ಡಾಯ ನಿಯಮ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿವಿಧ ಹಂತಗಳ ಅನುಮೋದನೆಗಳು ಹಾಗೂ ಪರಿಸರ, ಅರಣ್ಯ, ವನ್ಯಜೀವಿ ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಅಗತ್ಯ ಅನುಮತಿಗಳನ್ನು ಪಡೆಯಬೇಕಾಗುತ್ತದೆ ಎಂದು ಸಚಿವ ರಾಜ್ ಭೂಷಣ್ ಚೌಧರಿ ತಿಳಿಸಿದ್ದಾರೆ.

ತಮಿಳುನಾಡು ಹಲವು ವರ್ಷಗಳಿಂದ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಯೋಜನೆಯಿಂದ ಕಾವೇರಿ ನದಿಯ ನೀರಿನ ಹರಿವಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ವಾದಿಸುತ್ತಿದೆ. ಮತ್ತೊಂದೆಡೆ, ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆ ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿದ್ದು, ಕಾವೇರಿ ನ್ಯಾಯಮಂಡಳಿ ತೀರ್ಪಿನ ವ್ಯಾಪ್ತಿಯಲ್ಲಿಯೇ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ನಿರಂತರವಾಗಿ ಹೇಳುತ್ತಿದೆ.

ಈ ನಡುವೆ, ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಮೇಕೆದಾಟು ಯೋಜನೆ ಕುರಿತ ಚರ್ಚೆಗೆ ಹೊಸ ತಿರುವು ನೀಡಿದ್ದು, ಯೋಜನೆ ಮುಂದುವರಿಸುವ ಸಂಬಂಧ ಕರ್ನಾಟಕದ ವಾದಕ್ಕೆ ಬಲ ನೀಡುವ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

ENGLISH SUMMARY…

Mekedatu Project: No Consent Needed from Neighbouring States, Centre Clarifies

New Delhi, July 27: The Union Ministry of Jal Shakti has clarified that Karnataka does not need the consent of Tamil Nadu, Kerala, or Puducherry to construct the proposed Mekedatu reservoir.

In a written reply to a question by Tamil Nadu Rajya Sabha MP Dr. Anbumani Ramadoss, Union Minister of State for Jal Shakti Raj Bhushan Choudhary stated that there is no legal requirement for Karnataka to obtain approval from neighbouring states for the project.

The Minister, however, said the project must secure all mandatory statutory, environmental, forest, wildlife, and Central Government clearances before implementation.

Key words: Mekedatu Project, No Consent, Needed, Neighbouring, States, Central Government