ಮಂಡ್ಯ,ಜುಲೈ,8,2026 (www.justkannada.in): ಮಂಡ್ಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಬಾಯ್ಲರ್ ಗೆ ಇಂದು ಅಗ್ನಿ ಸ್ಪರ್ಶ ಮಾಡಲಾಗಿದ್ದು, ಜುಲೈ 15 ರಿಂದ ಕಬ್ಬು ಅರೆಯುವಿಕೆ ಪ್ರಾರಂಭವಾಗಲಿದೆ.
ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ಮಂಗಲ್ ದಾಸ್ ಅವರು ಬಾಯ್ಲರ್ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತವಾಗಿ ಕಾರ್ಖಾನೆಯ ಆರಂಭಕ್ಕೆ ಚಾಲನೆ ನೀಡಿದರು.
ಬಳಿಕ ಕಾರ್ಖಾನೆಯ ಎ ಮಿಲ್ ಗೆ ಕಬ್ಬನ್ನು ಹಾಕುವ ಮೂಲಕ ಕಬ್ಬು ಅರೆಯುವಿಕೆಗೆ ತಾತ್ಕಾಲಿಕವಾಗಿ ಚಾಲನೆ ನೀಡಲಾಗಿದ್ದು, ಜುಲೈನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಜುಲೈ 15 ರಿಂದ ಕಬ್ಬು ಅರೆಯುವಿಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕೆಂದು ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಕಾರ್ಖಾನೆಯು ಸುಸ್ಥಿತಿಯಲ್ಲಿದ್ದು `ಎ’ ಮಿಲ್ ನಲ್ಲಿ ಕಬ್ಬು ನುರಿಸಲಾಗುವುದು. ಪ್ರತಿನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಎ ಮಿಲ್ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 5.44 ಲಕ್ಷ ಟನ್ ಕಬ್ಬನ್ನು ಅರೆಯಲು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದ್ದು, ನವೆಂಬರ್ ಅಂತ್ಯದೊಳಗೆ ಎಲ್ಲ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ ಎಂದರು.
ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಮಾತನಾಡಿ, ಕಾರ್ಖಾನೆಯನ್ನು ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಪ್ರತಿನಿತ್ಯ 3,500 ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಶೇ 8.5ರಷ್ಟು ಸಕ್ಕರೆ ಇಳುವರಿ ನಿರೀಕ್ಷಿಸಲಾಗಿದೆ. ಕಳೆದ ವರ್ಷ ಕಬ್ಬು ಪೂರೈಸಿದ ಎಲ್ಲ ರೈತರಿಗೂ ಕಬ್ಬಿನ ಹಣವನ್ನು ಪಾವತಿಸಲಾಗಿದೆ. ಈ ವರ್ಷ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 15 ದಿನದೊಳಗೆ ಹಣವನ್ನು ಬಟವಾಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭ ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದ ಆದೇಶದಂತೆ 50 ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ರೈತ ಮುಖಂಡರು ಹಾಜರಿದ್ದರು.
Key words: Mysugar boiler, Sugarcane, milling , start, June 15





