ಯಶಸ್ಸಿಗೆ ಶಿಸ್ತು ಮತ್ತು ಅಣುಕು ಪರೀಕ್ಷೆಗಳು ಅತ್ಯಗತ್ಯ: ನಿತೀಶ್ ಪಾಟೀಲ್

ಮೈಸೂರು, ಜುಲೈ,7,2026 (www.justkannada.in): ಅಭ್ಯರ್ಥಿಗಳು ಮನೆಯಲ್ಲಿ ಎಷ್ಟೇ ಓದಿದರೂ ಪರೀಕ್ಷಾ ಕೇಂದ್ರದ ವಾತಾವರಣ, ಅಲ್ಲಿನ ಒತ್ತಡ ಮತ್ತು ಸಮಯದ ನಿರ್ವಹಣೆಗೆ  ಅಣುಕು ಪರೀಕ್ಷೆಗಳು ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ  ನಿತೀಶ್ ಪಾಟೀಲ್ ಅವರು ಹೇಳಿದರು.

ಇಂದು ಪೀಪಲ್ಸ್ ಪಾರ್ಕ್‌ ನಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಹಾಗೂ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ವಿಜಯನಗರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪೋಲೀಸ್‌ ಇಲಾಖಾ(ಸಿವಿಲ್ ಕಾನ್ಹೇಬಲ್ಸ್) ನೇಮಕಾತಿಯ “ಅಣುಕು” ಪರೀಕ್ಷೆಯನ್ನು  ಉದ್ಘಾಟಿಸಿ ನಿತೀಶ್ ಪಾಟೀಲ್ ಅವರು ಮಾತನಾಡಿದರು.

ಸ್ಪರ್ಧಾ ಅಭ್ಯರ್ಥಿಗಳು  ಒಎಂಆರ್ ಶೀಟ್‌ ಗಳನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಇಡೀ ಪರೀಕ್ಷೆಯೇ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಂತಹದೇ ತಪ್ಪುಗಳಿದ್ದರೂ ಅವುಗಳನ್ನು ಮಾಕ್ ಟೆಸ್ಟ್‌ ಗಳಲ್ಲೇ ತಿದ್ದಿಕೊಳ್ಳಬೇಕು. ನೀವು ದಿನಕ್ಕೆ 12 ರಿಂದ 16 ಗಂಟೆ ಓದಿದರೂ, ಮಾಕ್ ಟೆಸ್ಟ್ ಬರೆಯದಿದ್ದರೆ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಕಷ್ಟ ಎಂದರು. ಅಭ್ಯರ್ಥಿಗಳು ತಮ್ಮ ಒಟ್ಟು ಅಧ್ಯಯನದ ಅವಧಿಯಲ್ಲಿ ಕನಿಷ್ಠ ಶೇ. 30 ರಷ್ಟು ಸಮಯವನ್ನು ಮಾಕ್ ಟೆಸ್ಟ್‌ ಗಳಿಗಾಗಿ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಸರ್ಕಾರಿ ಉದ್ಯೋಗವನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಪಡಲೇಬೇಕು, ಅದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂದು ಹೇಳಿದರು.

ಕೇವಲ ಐಎಎಸ್ ಪರೀಕ್ಷೆ ಮಾತ್ರವಲ್ಲದೆ, ಕೆಪಿಎಸ್‌ ಸಿ, ಪಿಡಿಒ, ಬ್ಯಾಂಕ್ ಪರೀಕ್ಷೆಗಳು ಹಾಗೂ ಆರ್‌ ಬಿಐ ಪರೀಕ್ಷೆಗಳನ್ನು ಬರೆದಿದ್ದೆ. ಯಾವುದೇ ಗುರಿಯನ್ನು ತಲುಪಲು ಇತರ ಪರೀಕ್ಷೆಗಳನ್ನು ಕೀಳಾಗಿ ಕಾಣಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವ ಹುದ್ದೆಯೂ ಸಣ್ಣದಲ್ಲ ಮೊದಲು ಕಾನ್ಸ್‌ ಟೇಬಲ್ ಆಗಿ, ನಂತರ ಪಿಎಸ್ ಐ ಹಾಗೂ ಐಪಿಎಸ್ ಹುದ್ದೆಯನ್ನೂ ಅಲಂಕರಿಸಬಹುದು. ನನ್ನ ಬ್ಯಾಚ್‌ನಲ್ಲಿದ್ದ ನರ್ಸ್ ಒಬ್ಬರು ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಮುಕ್ತ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಓದಿದವರೂ ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ ಎಂದು ಉದಾಹರಣೆ ನೀಡಿದರು.

ಇಂಗ್ಲಿಷ್ ಬರುವುದಿಲ್ಲ ಎನ್ನುವ ಕೀಳರಿಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಹ ಯುಪಿಎಸ್‌ಸಿ ಪಾಸ್ ಮಾಡಿದ್ದಾರೆ. ನಾನು ಕೂಡ ಮುಂಚೆ ಕನ್ನಡ ಮಾಧ್ಯಮದಲ್ಲೇ ಓದಿದ್ದು, ನನ್ನ ಒಂದು ಐಚ್ಛಿಕ ವಿಷಯ ಕನ್ನಡ ಸಾಹಿತ್ಯವಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ ಮಾಜಿ ಕಮಿಷನರ್ ಗುರುದತ್ ಹೆಗಡೆ ಮತ್ತು ಬಿಜಾಪುರದ ಹಾಲಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರಂತಹ ಅಧಿಕಾರಿಗಳು ಇಂಗ್ಲಿಷ್ ಮಾಧ್ಯಮದ ಹಿನ್ನೆಲೆಯವರಾಗಿದ್ದರೂ,  ಯುಪಿಎಸ್‌ ಸಿ ಪರೀಕ್ಷೆಯ ಎಲ್ಲಾ ಪತ್ರಿಕೆಗಳನ್ನು ಕನ್ನಡದಲ್ಲೇ ಬರೆದು ತೇರ್ಗಡೆಯಾಗಿದ್ದಾರೆ. ಭಾಷೆಗಿಂತ ಕಠಿಣ ಪರಿಶ್ರಮ ಮುಖ್ಯ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಕ್ಷಣದ ಫಲಿತಾಂಶವನ್ನು ನಿರೀಕ್ಷಿಸಬಾರದು. ಮೊದಲ ಆರು ತಿಂಗಳು ಏನು ಓದಬೇಕು ಎನ್ನುವ ಗೊಂದಲವೇ ಇರುತ್ತದೆ. ಆದರೆ ಸತತವಾಗಿ ಏಳು-ಎಂಟು ವರ್ಷಗಳ ಕಾಲ ಪ್ರಯತ್ನಿಸಿ ಯಶಸ್ಸು ಕಂಡವರೂ ಇದ್ದಾರೆ. ಅಭ್ಯರ್ಥಿಗಳು ಶಿಸ್ತನ್ನು ಬೆಳೆಸಿಕೊಂಡು, ಮಾಕ್ ಟೆಸ್ಟ್‌ಗಳ ಮೂಲಕ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯಬೇಕು. ಆಡಳಿತ ಮಂಡಳಿಯು ಸದಾ ಅಭ್ಯರ್ಥಿಗಳ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್.ಬಿ,  ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Discipline, mock tests, essential, success, Nitish Patil, Mysore