ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ: ಅರುಣ್ ಯೋಗಿರಾಜ್ ಶಿಲ್ಪಕ್ಕೆ ಮೆಚ್ಚುಗೆ

ಮೈಸೂರು,ಜೂನ್,25,2026 (www.justkannada.in):  ನಗರದ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಆವರಣದ ಬಳಿ ರಾಜ್ಯದ ಮಾಜಿ ಮುಖ್ಯಮಂತ್ರಿ  ಡಿ.ದೇವರಾಜ ಅರಸು ಅವರ ನೂತನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಖ್ಯಾತ ಶಿಲ್ಪಿ  ಅರುಣ್ ಯೋಗಿರಾಜ್ ನಿರ್ಮಿಸಿರುವ ಈ ಪ್ರತಿಮೆ ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಅರಸು ಅವರ ವ್ಯಕ್ತಿತ್ವ ಮತ್ತು ಮುಖಚಹರೆಯನ್ನು ಜೀವಂತವಾಗಿ ಪ್ರತಿಬಿಂಬಿಸುವಂತಿದೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ದೇವರಾಜ ಅರಸು ಅವರ ಪ್ರತಿಮೆ ಕುರಿತು ಹಲವು ಆಕ್ಷೇಪಗಳು ಕೇಳಿಬಂದಿದ್ದವು. ಪ್ರತಿಮೆಯಲ್ಲಿ ದೇವರಾಜ ಅರಸು ಅವರ ಮುಖದ ಹೋಲಿಕೆ ಇಲ್ಲ, ಅವರ ವ್ಯಕ್ತಿತ್ವವನ್ನು ಸಮರ್ಪಕವಾಗಿ ಬಿಂಬಿಸಿಲ್ಲ ಎಂಬ ಟೀಕೆಗಳು ಸಾರ್ವಜನಿಕರು, ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳಿಂದ ವ್ಯಕ್ತವಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ಚರ್ಚೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಹೊಸ ಪ್ರತಿಮೆ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಹೆಸರಾಂತ ಶಿಲ್ಪಿಗಳಲ್ಲಿ ಒಬ್ಬರಾದ ಅರುಣ್ ಯೋಗಿರಾಜ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಅವರು ರೂಪಿಸಿರುವ ನೂತನ ಪ್ರತಿಮೆ ದೇವರಾಜ ಅರಸು ಅವರ ಮೂಲ ವ್ಯಕ್ತಿತ್ವ, ಮುಖಭಾವ, ಉಡುಗೆ ಹಾಗೂ ಗಾಂಭೀರ್ಯವನ್ನು ಅತ್ಯಂತ ನೈಜವಾಗಿ ಮೂಡಿಸಿರುವುದರಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೂತನ ಪ್ರತಿಮೆ ಸ್ಥಾಪನೆಯೊಂದಿಗೆ ಹಿಂದಿನ ಪ್ರತಿಮೆ ಕುರಿತ ವಿವಾದಕ್ಕೂ ತೆರೆ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಗೆ ಹಾಗೂ ರಾಜ್ಯದ ರಾಜಕೀಯ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದ ದೇವರಾಜ ಅರಸು ಅವರ ಗೌರವಕ್ಕೆ ತಕ್ಕ ರೀತಿಯ ಪ್ರತಿಮೆ ನಿರ್ಮಾಣವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಭೂಸುಧಾರಣೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ನೀತಿಗಳನ್ನು ಜಾರಿಗೆ ತಂದಿದ್ದ ದೇವರಾಜ ಅರಸು ಅವರ ಸೇವೆಯನ್ನು ಸ್ಮರಿಸುವ ಸಂಕೇತವಾಗಿ ಈ ನೂತನ ಪ್ರತಿಮೆ ರೂಪುಗೊಂಡಿದ್ದು, ಮೈಸೂರಿನ ಮತ್ತೊಂದು ಆಕರ್ಷಣೆಯಾಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.

ENGLISH SUMMARY…

Mysuru Gets New Devaraj Urs Statue at DC Office

Mysuru: A new statue of former Karnataka Chief Minister D. Devaraj Urs has been installed near the Deputy Commissioner’s Office in Mysuru. The statue, sculpted by renowned artist Arun Yogiraj, has won praise for its striking resemblance to the late leader.

The earlier statue at the same location had drawn criticism for not accurately reflecting Devaraj Urs’ likeness. The newly installed sculpture is being appreciated for capturing his facial features and personality more realistically, bringing an end to the controversy surrounding the old statue.

Key words: Mysuru, Devaraj Urs, New Statue, DC Office, Arun yogiraj