ಮೈಸೂರು,ಜೂನ್,22,2026 (www.justkannada.in): ಮದುವೆ ನಿಗದಿಯಾಗಿದ್ದ ಯುವತಿ, ಆಕೆಯ ತಂದೆ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಉಲ್ಲಾಸ್ ಗೌಡ ಎಂಬಾತನ ಕಿರುಕುಳ, ಬೆದರಿಕೆ ಹಾಗೂ ವೈಯಕ್ತಿಕ ಫೋಟೋ ಮತ್ತು ಸಂದೇಶಗಳನ್ನು ವರನಿಗೆ ಕಳುಹಿಸಿದ್ದರಿಂದ ಕುಟುಂಬ ಮಾನಹಾನಿಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದೆ ಎಂದು ಆರೋಪಿಸಿದ್ದಾರೆ.
ಮೃತ ಯುವತಿಯ ಚಿಕ್ಕಪ್ಪ ಮಾತನಾಡಿ, ನಾಳೆ ಮದುವೆ ಆಗಬೇಕಿದ್ದ ರಕ್ಷಿತಾಳ ಫೋಟೋ ಹಾಗೂ ಸಂದೇಶಗಳನ್ನು ಉಲ್ಲಾಸ್ ಗೌಡ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಕಳುಹಿಸಿದ್ದ. ಇದರಿಂದ ಗ್ರಾಮದಲ್ಲಿ ಮಾನ-ಮರ್ಯಾದೆ ಹಾಳಾಗಿದೆ ಎಂಬ ನೋವಿನಿಂದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರಕ್ಷಿತಾ ಮತ್ತು ಉಲ್ಲಾಸ್ ನಡುವೆ ಹಿಂದೆ ಪರಿಚಯ ಹಾಗೂ ಸಂಬಂಧವಿತ್ತು ಎನ್ನಲಾಗಿದೆ. ಆದರೆ ಯುವತಿಯ ಬದುಕಿನಲ್ಲಿ ಆಟವಾಡಿ ಆಕೆಯನ್ನು ಆತ್ಮಹತ್ಯೆ ಮಾಡುವ ಪರಿಸ್ಥಿತಿಗೆ ತಳ್ಳಿದ್ದಾನೆ ಎಂದು ಆರೋಪಿಸಿದ್ದಾರೆ.
ಮೃತ ಯುವತಿಯ ಅಜ್ಜಿ ಚಿನ್ನಮ್ಮ ಕೂಡ ಇದೇ ಆರೋಪ ಪುನರುಚ್ಚರಿಸಿ, ಮೊಮ್ಮಗಳ ಮದುವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಉಲ್ಲಾಸ್ ಗೌಡ ಫೋಟೋ ಹಾಗೂ ಸಂದೇಶಗಳನ್ನು ಕಳುಹಿಸಿ ಮದುವೆ ನಿಲ್ಲಿಸಲು ಯತ್ನಿಸಿದ್ದಾನೆ. ಆತನ ಕಿರುಕುಳ ಮತ್ತು ಬೆದರಿಕೆಯಿಂದಲೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.
ಇನ್ನೊಂದೆಡೆ, ಆರೋಪಿಯನ್ನು ಬಂಧಿಸುವವರೆಗೆ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಯತ್ನಿಸಿದ ವೇಳೆ ಗ್ರಾಮಸ್ಥರು ತಡೆದು, ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದವೂ ನಡೆದಿದೆ. ಉಲ್ಲಾಸ್ ಗೌಡನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Key words: Mysore, marriage, suicide, three members, same family, twist







