ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಒಪ್ಪಿಗೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,20,2026 (www.justkannada.in): ಮೈಸೂರು- ಫಂಡರಾಪುರ ನಡುವೆ ಸಂಚರಿಸುವ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಗಳ ಮೂಲಕ ಓಡಿಸಲು ರೈಲ್ವೆ ಮಂಡಳಿ ಶುಕ್ರವಾರ ಒಪ್ಪಿಗೆ ನೀಡಿದ್ದು, ಇದರಿಂದ ವಿಜಯಪುರ, ಬಾಗಲಕೋಟೆ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಕಡೆಗೆ ಚಲಿಸುವ ರೈಲುಗಳನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ  ಓಡಿಸಬೇಕೆಂದು ಹಲವು ಬಾರಿ ಪತ್ರ ಬರೆದು ಕೋರಿಕೆ ಸಲ್ಲಿಸಲಾಗಿತ್ತು. ಅದಕ್ಕೆ ರೈಲ್ವೆ ಮಂಡಳಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹೆಚ್ವಿನ ಅನುಕೂಲ ಆಗಲಿದೆ. ಇದಕ್ಕಾಗಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ವಿ.ಸೋಮಣ್ಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ಎರಡೂ ನಗರಗಳ ನಡುವಿನ ಪ್ರಯಾಣ ಅವಧಿ ಸುಮಾರು 55 ನಿಮಿಷ ಕಡಿಮೆ ಆಗಲಿದೆ. ಇದರ ಜತೆಗೆ ಸದ್ಯ ವಿಜಯಪುರ- ಬೆಂಗಳೂರು ‌ನಡುವೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಕೂಡ ಕಾಯಂ‌ ಮಾಡಬೇಕು ಎಂದು ಎಂ.ಬಿ ಪಾಟೀಲ್ ಒತ್ತಾಯಿಸಿದ್ದಾರೆ.

ಬೈಪಾಸ್ ಮಾರ್ಗದಲ್ಲಿ ರೈಲು ಸಂಚರಿಸಲು ಶುರುವಾದ ಮೇಲೆ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗದಲ್ಲಿ ಊರೊಳಕ್ಕೆ ಹೋಗುವುದಿಲ್ಲ. ಆದರೆ, ಅಲ್ಲಿಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ. ಹಾಗೆಯೇ, ರಾಜ್ಯ ಸರಕಾರದ ಕೋರಿಕೆಯಂತೆ ಮೈಸೂರು-ಫಂಡರಾಪುರ ನಡುವೆ ಮತ್ತೊಂದು ರೈಲು ಸೇವೆಯನ್ನು ಆದಷ್ಟು ಶೀಘ್ರವೇ ಪ್ರಾರಂಭಿಸಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಕೋರಿದ್ದಾರೆ.

ಹುಬ್ಭಳ್ಳಿ ಮತ್ತು ಗದಗದಲ್ಲಿ ಊರೊಳಕ್ಕೆ ರೈಲುಗಳು ಹೋಗುವುದರಿಂದ ವಿಜಯಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳ ಜನರಿಗೆ ಪ್ರಯಾಣಕ್ಕೆ ಹೆಚ್ವು ಕಾಲ ಹಿಡಿಸುತ್ತದೆ. ಆದ್ದರಿಂದ ಇಲ್ಲಿ ಬೈಪಾಸ್ ಮೂಲಕವೇ ಓಡಿಸಬೇಕೆಂದು ಕೇಂದ್ರ ಸರಕಾರದ ಗಮನವನ್ನು ನಿರಂತರವಾಗಿ ಸೆಳೆಯಲಾಗುತ್ತಿತ್ತು. ಈ ಸಂಬಂಧ ಪತ್ರ ವ್ಯವಹಾರ, ಅನುಸರಣಾ ಸಭೆಗಳು ಒಂದೇ ಸಮನೆ ನಡೆಯುತ್ತಿತ್ತು. ತಮ್ಮ ಬೇಡಿಕೆಗೆ ವೈಷ್ಣವ್ ಮತ್ತು ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಎಂ.ಬಿ ಪಾಟೀಲ್  ಹರ್ಷಿಸಿದ್ದಾರೆ.

ವೇಳಾಪಟ್ಟಿ ಬದಲು

ಮೈಸೂರು-ಫಂಡರಾಪುರ ನಡುವೆ ಸಂಚರಿಸುವ ಗೋಲ್ ಗುಂಬಜ್ ಎಕ್ಸ ಪ್ರೆಸ್ ಬೈಪಾಸ್ ಮಾರ್ಗಗಳಲ್ಲಿ ಓಡಲು ಆರಂಭಿಸಿದ ಬಳಿಕ ಮೈಸೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.05ಕ್ಕೆ ಫಂಡರಾಪುರವನ್ನು ತಲುಪಲಿದೆ. ಹಾಗೆಯೇ ಫಂಡರಾಪುರದಿಂದ ಬೆಳಿಗ್ಗೆ ಮಧ್ಯಾಹ್ನ 1.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.30ಕ್ಕೆ ಮೈಸೂರನ್ನು ತಲುಪಲಿದೆ. ಮೊದಲಿಗೆ ಹೋಲಿಸಿದರೆ ಪ್ರಯಾಣದಲ್ಲಿ 55 ನಿಮಿಷ ಉಳಿತಾಯವಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

Key words: Approval, Golagumbaz Express, train, Hubballi, Gadag, bypass, Minister, M.B. Patil