ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ: ವೈದ್ಯರ ಕೊರತೆ, ಸರಣಿ ಸಾವುಗಳ ಬಗ್ಗೆ ಆಕ್ರೋಶ

ಮೈಸೂರು, ಜೂನ್,17,2026 (www.justkannada.in): ಹೃದಯ ರೋಗಿಗಳ ಚಿಕಿತ್ಸೆಗೆ ಹೆಸರಾಗಿರುವ ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯರ ಕೊರತೆ ಹಾಗೂ ಆಡಳಿತಾತ್ಮಕ ಅವ್ಯವಸ್ಥೆ ತೀವ್ರಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಲಭ್ಯವಾಗುತ್ತಿಲ್ಲ, ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಸಮರ್ಪಕ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಮತ್ತು ಅವರ ಕುಟುಂಬಸ್ಥರು ಪರದಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಸ್ಪತ್ರೆ ಆವರಣದಲ್ಲೇ ವಿಡಿಯೋ ಮಾಡಿ ಸಾರ್ವಜನಿಕರು ತಮ್ಮ ಅಸಮಾಧಾನ ಹೊರಹಾಕಿದ್ದು, ಸಿಬ್ಬಂದಿಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿರುವುದು ಗಮನ ಸೆಳೆದಿದೆ.

ಕಳೆದ ಎರಡು ದಿನಗಳಲ್ಲಿ 12ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೆಲವರು ಗಂಭೀರ ಆರೋಪ ಮಾಡಿದ್ದು, ಈ ಸಾವುಗಳ ಹಿಂದೆ ವೈದ್ಯರ ಕೊರತೆ ಮತ್ತು ತುರ್ತು ಸೇವೆಗಳ ವೈಫಲ್ಯ ಕಾರಣ ಎಂಬ ವಾದ ಮುಂದಿಟ್ಟಿದ್ದಾರೆ. ಆದರೆ ಈ ಆರೋಪಗಳ ಕುರಿತು ಆಸ್ಪತ್ರೆ ಆಡಳಿತದಿಂದ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಂದಿಲ್ಲ.

ರೋಗಿಗಳ ಸಂಬಂಧಿಕರ ಪ್ರಕಾರ, ರಾತ್ರಿ ಪಾಳಿಯಲ್ಲಿ ಸಮರ್ಪಕ ಸಂಖ್ಯೆಯ ವೈದ್ಯರು ಕರ್ತವ್ಯ ನಿರ್ವಹಿಸುತ್ತಿಲ್ಲ. ಬೆಳಗಿನ ಪಾಳಿಯಲ್ಲೂ ವೈದ್ಯರು ನಿಗದಿತ ಸಮಯಕ್ಕೆ ಬಾರದ ಕಾರಣ ತುರ್ತು ಚಿಕಿತ್ಸೆಗೆ ಬಂದವರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೃದಯ ಸಂಬಂಧಿ ತುರ್ತು ಪ್ರಕರಣಗಳಲ್ಲಿ ಕ್ಷಣ ಕ್ಷಣವೂ ಅಮೂಲ್ಯವಾಗಿರುವ ಸಂದರ್ಭದಲ್ಲಿ ವೈದ್ಯಕೀಯ ಸೇವೆಯ ವಿಳಂಬ ರೋಗಿಗಳ ಜೀವಕ್ಕೆ ಅಪಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಮೃತಪಟ್ಟವರಲ್ಲಿ ಸೈಯ್ಯದ್ ಆರೀಫ್ ಪಾಷ (80), ಹರೀಶ್ ಬಿ.ಆರ್. (40), ಬಾಲಶಂಕರ್ (65), ಸಂಶುನ್ನೀಶ್ (70), ರಾಜು (54), ನಿಂಗೇಗೌಡ (70), ಮಸೀನಾ ಬಾನು (58), ಗೋಪಾಲರಾಜು (55), ಬೈರೋಜಿ ರಾವ್ (80), ಸುಹಾಲ್ ಖಾನ್ (43), ನೀಲಿ (79) ಸೇರಿದಂತೆ ಹಲವರು ಸೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ (Dr. C. N. Manjunath) ಅವರು ನಿರ್ದೇಶಕ ಸ್ಥಾನದಿಂದ ನಿರ್ಗಮಿಸಿದ ನಂತರ ಆಸ್ಪತ್ರೆಯ ಆಡಳಿತ ಮತ್ತು ಸೇವಾ ವ್ಯವಸ್ಥೆಯಲ್ಲಿ ಕುಸಿತ ಉಂಟಾಗಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. “ಒಮ್ಮೆ ಶಿಸ್ತು ಮತ್ತು ಸೇವಾ ಗುಣಮಟ್ಟಕ್ಕೆ ಮಾದರಿಯಾಗಿದ್ದ ಜಯದೇವ ಆಸ್ಪತ್ರೆ ಈಗ ಅವ್ಯವಸ್ಥೆಯ ಕೇಂದ್ರವಾಗುತ್ತಿದೆ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ನಿಜವಾಗಿಯೂ ವೈದ್ಯರ ಕೊರತೆ ಇದೆಯೇ? ಕಳೆದ ಎರಡು ದಿನಗಳ ಸಾವುಗಳ ಕುರಿತು ಅಧಿಕೃತ ದಾಖಲೆ ಏನು ಹೇಳುತ್ತವೆ? ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ಸಂಖ್ಯೆ ಎಷ್ಟು? ಎಂಬ ಪ್ರಶ್ನೆಗಳಿಗೆ ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ವೈದ್ಯಕೀಯ ಸೇವೆಗಳ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆ ಆಡಳಿತ ತಕ್ಷಣ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ಹೆಚ್ಚಾಗಿದೆ.

Key words: Mysore, Jayadeva Hospital, doctor shortage, series of deaths, Patient