ಮೈಸೂರು, ಮೇ, 29, 2026 (www.justkannada.in): ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಗೃಹಬಳಕೆದಾರರ ಮನೆಯ ಛಾವಣಿಯಲ್ಲಿ ಸೌರಫಲಕಗಳನ್ನು ಸ್ಥಾಪಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ವಿಜಯನಗರ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಪ್ರದಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ ಇಡಿ ಪರದೆ ಅಳವಡಿಸಿರುವ ವಾಹನದ ಮೂಲಕ ಪ್ರಚಾರ ಕಾರ್ಯಕ್ಕೆ ಚಾವಿಸನಿನಿ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ ಹಾಗೂ ಚಾವಿಸನಿನಿ ಮೈಸೂರು ವೃತ್ತದ ಮುಖ್ಯ ಇಂಜಿನಿಯರ್ ಎಲ್. ಲೋಕೇಶ್ ಅವರು ಹಸಿರು ನಿಶಾನೆ ತೋರಿಸಿದರು.
ನಗರದ ಹಲವೆಡೆಗಳಲ್ಲಿ ಸಂಚಾರ :
ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಾಲನೆ ನೀಡಲಾಗಿರುವ ಈ ಪ್ರಚಾರ ವಾಹನ ಮೂರು ದಿನಗಳು ಬೆಳಗ್ಗಿನಿಂದ ರಾತ್ರಿಯವರೆಗೂ ನಗರದೆಲ್ಲೆಡೆ ಸಂಚರಿಸಲಿದೆ. ಮೇ 30ರಂದು ಕುವೆಂಪುನಗರ, ವಿವೇಕಾನಂದನಗರ, ಆಂದೋಲನ ವೃತ್ತ, ದಟ್ಟಗಳ್ಳಿ ವೃತ್ತ, ಆರ್ .ಆರ್ ನಗರ, ಶಾರದಾದೇವಿನಗರ, ಬೋಗಾದಿ, ವಿಜಯನಗರ, ಅರಮನೆ ಸುತ್ತಮುತ್ತ, ಅಗ್ರಹಾರ ವೃತ್ತ, ಪಾಠಶಾಲಾ ವೃತ್ತ, ಕೆ.ಆರ್ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಮಂಡಿ ಮೊಹಲ್ಲಾ, ಬನ್ನಿಮಂಟಪ, ಎಲ್.ಐ.ಸಿ ವೃತ್ತ, ಫೌಂಟೆನ್ ವೃತ್ತ, ಸೆಂಟ್ ಫಿಲೋಮಿನಾ ಚರ್ಚ್ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲಿದೆ.
ಮೇ 31ರಂದು ನಗರ ಬಸ್ ನಿಲ್ದಾಣ, ಮೆಟ್ರೋಪೋಲ್ ವೃತ್ತ, ಕಲಾಮಂದಿರ, ಮಹಾರಾಣಿ ಕಾಲೇಜ್ ಜಂಕ್ಷನ್, ಪಡುವಾರಳ್ಳಿ ವೃತ್ತ, ಐಶ್ವರ್ಯ ಪೆಟ್ರೋಲ್ ಬಂಕ್ ಜಂಕ್ಷನ್, ಹಿನಕಲ್ ವೃತ್ತ, ಹೂಟಗಳ್ಳಿ, ಬೆಳವಾಡಿ, ಇಲವಾಲ, ಮೈಸೂರು ಅರಮನೆ ಸುತ್ತಮುತ್ತ, ಗ್ರಾಮಾಂತರ ಬಸ್ ನಿಲ್ದಾಣ, ಹಾರ್ಡಿಂಗ್ ವೃತ್ತ, ಗೋಪಾಲಗೌಡ ಆಸ್ಪತ್ರೆ ವೃತ್ತ, ಮಿಲ್ಕ್ ಡೈರಿ ವೃತ್ತ, ಸಿದ್ದಾರ್ಥ ಬಡಾವಣೆ, ಟೆರಿಷಿಯನ್ ಕಾಲೇಜ್ ವೃತ್ತ, ದೇವೇಗೌಡ ವೃತ್ತ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲಿದೆ.
ಆದಾಯ, ಉಳಿತಾಯದ ಮೂಲ :
ಪಿಎಂ ಸೂರ್ಯ ಘರ್ ಯೋಜನೆಯು ಆದಾಯ ಮತ್ತು ಉಳಿತಾಯದ ಮೂಲವಾಗಿದೆ. ಗ್ರಾಹಕರು ತಮ್ಮ ಮನೆಯ ಮೇಲೆ ಸೌರಘಟಕ ಸ್ಥಾಪಿಸಲು, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಮೂಲಕ ಆಕರ್ಷಕ ಸಬ್ಸಿಡಿ ಸೌಲಭ್ಯ ಪಡೆಯಬಹುದಾಗಿದೆ. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗಲಿದ್ದು, ಇದು ಪರಿಸರ ಸ್ನೇಹಿ ಯೋಜನೆಯು ಆಗಿದೆ. ಸೌರಶಕ್ತಿಯಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಸೆಸ್ಕ್ ಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಪಡೆಯಬಹುದು.
ಈ ಸಂದರ್ಭದಲ್ಲಿ ಚಾವಿಸನಿನಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರಾದ ಆರ್. ರಾಮಸ್ವಾಮಿ, ಎಚ್.ಆರ್. ದಿನೇಶ್, ಬಿ.ಆರ್. ರೂಪ ಸೇರಿದಂತೆ ಪ್ರಮುಖ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಸೂರ್ಯಘರ್ ಯೋಜನೆ ಉಪಯೋಗ:
ಪಿಎಂ ಸೂರ್ಯ ಘರ್ ಯೋಜನೆ ಮನೆಯ ವಿದ್ಯುತ್ ಅವಶ್ಯಕತೆ ಪೂರೈಸುವ ಯೋಜನೆಯಾಗಿದ್ದು, ಈ ಯೋಜನೆ ಮೂಲಕ ಸಾರ್ವಜನಿಕರು ಮನೆಗಳ ಮೇಲೆ ಸೌರಫಲಕ ಸ್ಥಾಪಿಸಿ, ಆಕರ್ಷಕ ಸಬ್ಸಿಡಿ ಪಡೆಯುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ.
– 1 ಕೆವಿ ಸಾಮರ್ಥ್ಯದವರೆಗಿನ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹30000
– 2 ಕೆವಿ ಸಾಮರ್ಥ್ಯದವರೆಗಿನ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹60000
– 3 ಕೆವಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹78000 ಪಡೆಯಬಹುದಾಗಿದೆ.
ಯೋಜನೆ ಮಾಹಿತಿಗಾಗಿ: 9448994706 ಅಥವಾ ಇ-ಮೇಲ್ ವಿಳಾಸ: gmproj1@cescmysore.org ಸಂಪರ್ಕಿಸಬಹುದು.
Key words: PM Surya Ghar Yojana, promotional, vehicle, Mysore







