ಮೈಸೂರು,ಮಾರ್ಚ್,26,2026 (www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ (ರಿ)ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರು ವೆಸ್ಟ್ ಸಂಸ್ಥೆಗಳ ಆಶ್ರಯದಲ್ಲಿ ‘ಕಲಿಯುವ ಮನೆ’ಯಲ್ಲಿ ‘ಒಡನಾಟ’ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಲಿಯುವ ಮನೆಯ ನೇಸರ ಮತ್ತು ಚೇತನಾ ಗುಂಪಿನ 12 ರಿಂದ 14 ವಯಸ್ಸಿನ ಮಕ್ಕಳೊಂದಿಗೆ ಅಕ್ಟೋಬರ್ ನಿಂದ ಪ್ರತಿ ತಿಂಗಳು ಒಂದೊಂದು ಕಾರ್ಯಾಗಾರ ನಡೆಸಲಾಗಿತ್ತು. ಈ ಸರಣಿಯ 6ನೇ ಮತ್ತು ಕೊನೆಯ ಕಾರ್ಯಾಗಾರ ಬುಧವಾರ ನಡೆಯಿತು.
ನನ್ನನ್ನು ನಾ ಅರಿಯಲು: ‘ನನ್ನನ್ನು ನಾನು ಅರಿತುಕೊಳ್ಳಲು ನೆರವಾಯಿತು. ನನ್ನ ಜೀವನದಲ್ಲಿ ಬಹು ಮುಖ್ಯಘಟನೆಯಿದು,’ ಎಂದಳು ಅನುಶ್ರೀ. ‘ದೌರ್ಜನ್ಯಗಳ ಬಗ್ಗೆ ಅರಿವು ಮೂಡಿತು. ತಪ್ಪನ್ನು ತಪ್ಪು ಎಂದು ಹೇಳಬೇಕು. ಎಲ್ಲರೂ ಒಂದೇ. ಜಾತಿ ಬೇಧ ಮಾಡಬಾರದು ಎನ್ನುವುದನ್ನು ಕಲಿತೆ,’ ಎಂದವಳು ದೀಕ್ಷಿತಾ. ಸಂಜನಾ’ಎಲ್ಲರೂ ಎಲ್ಲರನ್ನೂ ಗೌರವಿಸಬೇಕು,’ಎನ್ನುವುದನ್ನು ಕಲಿತಳಂತೆ. ನಿಖಿಲ್, ನವೀನ್ ಅವರದು ಕೂಡ ಇಂಥದೇ ಅಭಿಪ್ರಾಯ.
ಪರಿಣಾಮಕಾರಿ: ‘ಕಾರ್ಯಾಗಾರ ನಡೆಯುತ್ತಿದ್ದಾಗ ಆಗಾಗ ಬಂದು ನೋಡ್ತಿದ್ದೆ. ಮಕ್ಕಳು ಬೇರೆ ತರಗತಿಗಳಿಗಿಂತ ಇಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು.ಹಾಡು, ಕತೆ, ಚಟುವಟಿಕೆಗಳ ಮೂಲಕ ಹೇಳಿಕೊಡುತ್ತಿದ್ದುದು ಸಾಕಷ್ಟು ಪರಿಣಾಮ ಬೀರಿದೆ. ಇದನ್ನು ಇಲ್ಲಿಗೇ ನಿಲ್ಲಿಸದೆ, ಮುಂದುವರಿಸಿದರೆ ಉಪಯೋಗವಾಗುತ್ತದೆ’ ಎಂದು ಕಲಿಯುವ ಮನೆಯ ಮುಖ್ಯಸ್ಥರಾದ ಅನಂತ ಅವರು ಅಭಿಪ್ರಾಯ ಪಟ್ಟರು.
ನಮ್ಮದೊಂದು ಸಣ್ಣ ಹನಿ: ‘ಜೀವನ ಕೌಶಲ್ಯ, ಲಿಂಗತ್ವ ಸಂವೇದನೆ, ದೌರ್ಜನ್ಯ, ತಾರತಮ್ಯಗಳ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ತಮ್ಮ ಬದುಕಿನಲ್ಲಿ ಸಂವೇದನಾಶೀಲರನ್ನಾಗಿಸುವುದು ಮುಖ್ಯ ಉದ್ದೇಶಗಳಾಗಿದ್ದವು. ಲಿಂಗಸೂಕ್ಷ್ಮತೆಯ ಕುರಿತಂತೆ ಹೆಚ್ಚಿನ ಮಾತುಕತೆ ನಡೆಸಲಾಯಿತು. ಇದಕ್ಕೆ ಪೂರಕವಾದ ಹಾಡು, ಆಟ, ಕತೆಗಳನ್ನು ಬಳಸಲಾಯಿತು. ಕೆಲವು ಪುಸ್ತಕಗಳನ್ನು ಓದಿ ಚರ್ಚೆ ಮಾಡಲಾಯಿತು,’ಎಂದು ‘ಒಡನಾಟ’ದ ಸ್ವರೂಪವನ್ನು ರೂಪಿಸಿ, ಮುನ್ನಡೆಸಿದ ವಾಣಿ ಪೆರಿಯೋಡಿ ಅವರು ಹೇಳಿದರು.
‘ಆರಂಭದಲ್ಲಿ ಲಿಂಗ ಸಮಾನತೆಗೆ ಸಂಬಂಧಿಸಿ ಮಕ್ಕಳಲ್ಲಿ ಬಹಳ ಆಳವಾಗಿ ಪೂರ್ವಾಗ್ರಹಗಳು ಇರುವುದು ಕಂಡು ಬಂದಿತ್ತು. ಕ್ರಮೇಣ ಚಿಂತನೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಗಮನಿಸಲಾಯಿತು. ಎಲ್ಲಾ ಕಲಿಕಾ ಪ್ರಕ್ರಿಯೆಗಳು ಮಕ್ಕಳ ಭಾಗವಹಿಸುವಿಕೆಯಲ್ಲಿ ನಡೆಯುವ ರೀತಿಯಲ್ಲಿ ಈ ಕಾರ್ಯಾಗಾರ ವಿನ್ಯಾಸ ಮಾಡಲಾಗಿತ್ತು. ಈ ಒಡನಾಟದಿಂದ ನಮಗೂ ಅನೇಕ ರೀತಿಯ ಕಲಿಕೆಗಳಾದವು. ಇಂಥ ಮಕ್ಕಳ ಭವಿಷ್ಯ ರೂಪಿಸಲು ಕಲಿಯುವ ಮನೆ ಮಾಡುತ್ತಿರುವ ಕೆಲಸಗಳಲ್ಲಿ ನಮ್ಮದೊಂದು ಸಣ್ಣ ಹನಿ,’ ಎಂದರು.
ಸಮತಾ, ಲಯನ್ಸ್ ಸಂಸ್ಥೆಗಳ ಪರವಾಗಿ ಕಾರ್ಯಾಗಾರದ ಭಾಗವಾಗಿದ್ದ ಅಲಕ ಅವರು ಒಡನಾಟಕ್ಕೆ ಮಕ್ಕಳು ಸ್ಪಂದಿಸಿದ ಬಗೆಯನ್ನು ವಿವರಿಸಿದರು. ‘ವಾಣಿ ಮತ್ತುತಂಡದವರು ಮಕ್ಕಳಿಗೆ ಕಲಿಸುತ್ತ ನಮಗೂ ಕಲಿಸಿದರು,’ ಎಂದರು. ಎರಡು ಸಂಸ್ಥೆಗಳು ಸೇರಿ ಕಲಿಯುವ ಮನೆ ಮಕ್ಕಳ ಜೊತೆ ಈ ಕಾರ್ಯಕ್ರಮ ನಡೆಸಲು ಕಾರಣವಾದ ಅಂಶಗಳನ್ನು ವಿಜಯಾರಾವ್ ವಿವರಿಸಿದರು. ‘ಇಲ್ಲಿನ ಮಕ್ಕಳನ್ನು ಭವಷ್ಯದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಅನಂತ ಅವರ ಕೆಲಸ ಅನಂತವಾದುದು,’ ಎಂದು ಮೆಚ್ಚುಗೆ ಸೂಚಿಸಿದರು.
ಅಂದುಕೊಂಡದ್ದು ಆಗ್ತಿದೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅವರು,’ಸಮತಾ ಅಧ್ಯಯನ ಕೇಂದ್ರ ಹಲವು ಕಾಲೇಜುಗಳಲ್ಲಿ ಅರಿವಿನ ಪಯಣ ಕಾರ್ಯಕ್ರಮ ಆಯೋಜಿಸಿತ್ತು. ಸೀಮಿತ ಅವಧಿಯ ಈ ಕಾರ್ಯಕ್ರಮಗಳು ನಿರೀಕ್ಷಿತ ಪರಿಣಾಮ ಬೀರಿರಲಿಲ್ಲ. ಇಲ್ಲಿ ನಾವು ಅಂದುಕೊಂಡದ್ದು ಆಗ್ತಿದೆ. ಮೊದಲ ಬಾರಿ ಬಂದಾಗ ಕಲಿಯುವ ಮನೆ ದೂರ ಎನ್ನಿಸಿತು. ಈಗ ಹತ್ತಿರಾಗಿದೆ. ನಮ್ಮ ಆಲೋಚನೆಗಳನ್ನು ವಿಸ್ತರಿಸಿಕೊಳ್ಳಲು ನೀವೆಲ್ಲ ಕಾರಣರಾಗಿದ್ದೀರಿ,’ ಎಂದರು.
ಕೊನೆ ಬೇಡ, ಮುಂದುವರಿಸಿ: ‘ನಮಗೆ ಮನೆಯಲ್ಲಿ ಒಂದೆರಡು ಮಕ್ಕಳನ್ನು ನಿಭಾಯಿಸುವುದೇ ಕಷ್ಟ. ಕಲಿಯುವ ಮನೆ ವಿವಿಧ ಹಿನ್ನೆಲೆಯ ನೂರಕ್ಕೂ ಹೆಚ್ಚು ಮಕ್ಕಳ ಜೊತೆ ಒಡನಾಡುತ್ತಾ, ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಸಮಾಜಕ್ಕೆ ನೀಡಲು ಪ್ರಯತ್ನಿಸುತ್ತಿರುವುದು ಶ್ಲಾಘನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ ಒಡನಾಟ ಕಾರ್ಯಾಗಾರವನ್ನು ಇಲ್ಲಿಗೆ ಕೊನೆ ಮಾಡೋಣವೇ ‘ಎಂದು ಸಬಿಹಾ ಅವರು ಮಕ್ಕಳನ್ನು ಕೇಳಿದರೆ,’ ಬೇಡ. ಮುಂದುವರಿಸಿ’ ಎಂಬ ಒಕ್ಕೊರಲಿನ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡೂ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿಮ್ಮ ಜೊತೆಗಿನ ‘ಒಡನಾಟ’ವನ್ನು ಮುಂದುವರಿಸುತ್ತೇವೆ ಎನ್ನುವ ಭರವಸೆ ನೀಡಿದರು.
Key words: Samatha adyayan Kendra, Lions Club of Mysore West, odanata







