Tuesday, September 22, 2026

BDA Apartments

ಏ.1ರಿಂದ ಅರಣ್ಯ ಇಲಾಖೆ ಹಂಗಾಮಿ ನೌಕರರ ಮುಷ್ಕರ BDA JK_Adv BDA Adv
Home Front Page ಏ.1ರಿಂದ ಅರಣ್ಯ ಇಲಾಖೆ ಹಂಗಾಮಿ ನೌಕರರ ಮುಷ್ಕರ..

ಏ.1ರಿಂದ ಅರಣ್ಯ ಇಲಾಖೆ ಹಂಗಾಮಿ ನೌಕರರ ಮುಷ್ಕರ..

ಬೆಂಗಳೂರು,ಮಾರ್ಚ್,23,2026 (www.justkannada.in):  ಹೊರಗುತ್ತಿಗೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ನೀಡುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏಪ್ರಿಲ್‌ 1 ರಿಂದ ಮುಷ್ಕರ ನಡೆಸಲು ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ವನ್ಯಜೀವಿ, ಪ್ರಾದೇಶಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 4,000 ಕ್ಕೂ ಅಧಿಕ ಹಂಗಾಮಿ ನೌಕರರು ಕಳೆದ ನವೆಂಬರ್‌ ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಇದುವರೆಗೂ ಸರ್ಕಾರದಿಂದ ಸ್ಪಂದನೆ ಸಿಗದ ಕಾರಣ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಈ ಬಾರಿ ಬಂಡೀಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ. ಈ ಹಿಂದೆ ಎರಡು ಬಾರಿ ಪ್ರತಿಭಟನೆ ನಡೆಸಿದರೂ ಬರೀ ಭರವಸೆ ಬಿಟ್ಟರೆ ಏನೂ ಬದಲಾವಣೆ ಆಗಿಲ್ಲ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಈ ಬಾರಿ ಮುಷ್ಕರ ನಿಲ್ಲಿಸಲ್ಲ’ ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಎಂ. ನಾಗರಾಜು ತಿಳಿಸಿದರು.

ಮೊದಲು ಕ್ಷೇಮಾಭಿವೃದ್ದಿ ಅಧಿನಿಯಮದಡಿ ಹಂಗಾಮಿ ನೌಕರರಿಗೆ ವೇತನ ಹಾಗೂ ಸೌಲಭ್ಯ ನೀಡಲಾಗುತ್ತಿತ್ತು. 2017ರಲ್ಲಿ ಅದನ್ನು ಬದಲಾಯಿಸಿ ಟೆಂಡರ್ ಮೂಲಕ ಏಜೆನ್ಸಿಗಳಿಂದ ವೇತನ ನೀಡಲಾಗುತ್ತಿದೆ. ಇದರಿಂದ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗಿದೆ. ಹೀಗಾಗಿ, ಇದನ್ನು ಬದಲಾಯಿಸಿ ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದರು.

ಹಿಂದೆ ಪ್ರತಿಭಟನೆ ನಡೆಸಿದಾಗ ಅರಣ್ಯ ಸಚಿವ ಈಶ್ವರ ಖಂಡ್ರೆ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ, ಹಿರಿಯ ಅಧಿಕಾರಿಗಳು ಮನವಿಗೆ ಸ್ಪಂದಿಸುವುದಾಗಿ ಹೇಳಿದ್ದರು. ಸಮಿತಿ ರಚಿಸಿದರೂ ಸೂಕ್ತ ತೀರ್ಮಾನ ಇಲಾಖೆಯಲ್ಲಿ ಆಗುತ್ತಿಲ್ಲ. ಸರ್ಕಾರದ ಹಂತದಲ್ಲಿಯೇ ಇದು ಆಗಬೇಕು ಎಂದು ಕೈ ಚೆಲ್ಲುತ್ತಿದ್ಧಾರೆ. ಏಪ್ರಿಲ್‌ 1 ರಿಂದ ಮುಂದಿನ ಒಂದು ವರ್ಷದ ಗುತ್ತಿಗೆ ಕರಾರಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದು ಜಾರಿಯಾದರೆ ನಮ್ಮ ಪ್ರಮುಖ ಸಮಸ್ಯೆ ಬಗೆಹರಿಯವುದಿಲ್ಲ. ಈಗಲೇ ಸೂಕ್ತ ತೀರ್ಮಾನ ಆಗಬೇಕು ಎಂದು ಸಂಘದ ಉಪಾಧ್ಯಕ್ಷ ಎಸ್‌.ಎಸ್‌.ಹರೀಶ್‌ ಹೇಳಿದರು.

Key words: Forest Department, temporary employees, strike, April