ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ: ಕರವೇ ತೀವ್ರ ಪ್ರತಿಭಟನೆ, ಆಕ್ರೋಶ

ಬೆಂಗಳೂರು,ಮಾರ್ಚ್,17,2026 (www.justkannada.in):  ರೈಲ್ವೆ ಇಲಾಖೆಯಲ್ಲಿ ಮುಂಬಡ್ತಿ ಪರೀಕ್ಷೆಯಲ್ಲಿ ಕೇವಲ ಹಿಂದಿ ಇಂಗ್ಲೀಷ್ ಭಾಷೆಗೆ ಅವಕಾಶ ನೀಡಿ ಕನ್ನಡ ಭಾಷೆಯನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಮೈಸೂರು , ಹುಬ್ಬಳ್ಳಿ ಸೇರಿ ಹಲವೆಡೆ  ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಗೆ ಮುತ್ತಿಗೆ ಹಾಕಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು. ಹುಬ್ಬಳ್ಳಿಯ ಆರ್‌ಆರ್‌ಸಿ (RRC) ಕಚೇರಿಯ ಎದುರು ಕೂಡ ಪ್ರತಿಭಟನೆಗಳು ನಡೆದಿವೆ.

ರೈಲ್ವೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಿರುವುದನ್ನು ಖಂಡಿಸಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕೆಂದು ತಮ್ಮ ಕಾರ್ಯಕರ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಕರೆ ನೀಡಿದ್ದರು.

ಅದಂತೆ, ಪರೀಕ್ಷೆಗಳು ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು ಸೇರಿದಂತೆ ಹಲವು ಪರೀಕ್ಷಾ ಕೇಂದ್ರಗಳಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ್ದಾರೆ.

ಕರವೇ ಪ್ರತಿಭಟನೆಗೆ ಮಣಿದ ರೈಲ್ವೆ ಇಲಾಖೆ: ಪರೀಕ್ಷೆ ಮುಂದೂಡಿಕೆ

ಕನ್ನಡಪರ ಹೋರಾಟಗಾರರು ನಡೆಸಿದ ಹೋರಾಟಕ್ಕೆ ರೈಲ್ಚೆ ಇಲಾಖೆ ಅಧಿಕಾರಿಗಳು ಮಣಿದಿದ್ದು, ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Kannada, railway exam, Karave, protests