ಮೈಸೂರು,ಮಾರ್ಚ್,9.2026 (www.justkannada.in): ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಇರುವ KSIC ಫಿಲೇಚರ್ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂದು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
1912ರಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಈ ಐತಿಹಾಸಿಕ ಕಾರ್ಖಾನೆಯ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ಇದಕ್ಕೆ ಕಾರ್ಖಾನೆ ಸಿಬ್ಬಂದಿ, ಪರಿಸರ ಪ್ರೇಮಿಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕ್ರೀಡಾಂಗಣ ನಿರ್ಮಾಣಕ್ಕಾಗಿ 100 ವರ್ಷಗಳಿಗೂ ಹಳೆಯದಾದ ಸುಮಾರು 500 ಮರಗಳನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದ ಶತಮಾನಗಳ ಇತಿಹಾಸ ಹೊಂದಿರುವ ರೇಷ್ಮೆ ಉದ್ಯಮ ಹಾಗೂ ಅಪರೂಪದ ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು.
ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಾರ್ಖಾನೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಕೆಲ ಬಿಜೆಪಿ ನಾಯಕರು ಖುದ್ದು ಕಾರ್ಖಾನೆಗೆ ಭೇಟಿ ನೀಡಿ ಪ್ರತಿಭಟನಾ ನಿರತ ಕಾರ್ಮಿಕರೊಂದಿಗೆ ಏಕತಾ ಸೂಚಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಕರ್ನಾಟಕದ ಅಸ್ಮಿತೆಯಾದ KSIC ಮೈಸೂರು ಸಿಲ್ಕ್ ಉದ್ಯಮವನ್ನು ಉಳಿಸುವ ಹೋರಾಟಕ್ಕೆ ಜಯ ಸಿಕ್ಕಿದೆ. ಕಾರ್ಮಿಕರ ಹಾಗೂ ಸಾರ್ವಜನಿಕರ ಭಾವನೆಗಳಿಗೆ ಮಣಿದು ಕಾಂಗ್ರೆಸ್ ಸರ್ಕಾರ ಕ್ರೀಡಾಂಗಣ ನಿರ್ಮಾಣದ ನಿರ್ಧಾರದಿಂದ ಹಿಂದೆ ಸರಿದಿದೆ. ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಸ್ವಾಗತಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
Key words: Government, stadium, KSIC Filature factory, Mysore







