ಅಮೆಜಾನ್ ಕಂಪನಿಯ ಕಾರ್ಪೊರೇಟ್ ಪ್ರಧಾನ ಕಚೇರಿ ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್

ಬೆಂಗಳೂರು,ಫೆಬ್ರವರಿ,23,2026 (www.justkannada.in):  ಅಮೆಜಾನ್ ಕಂಪನಿಯು ಇಲ್ಲಿನ ಯಲಹಂಕ ಸಮೀಪದ ವಿನಾಯಕ ನಗರದಲ್ಲಿ ನಿರ್ಮಿಸಿರುವ, 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, `ಇದು ರಾಜ್ಯದಲ್ಲಿ ಅಮೆಜಾನ್ ಕಂಪನಿಯ 10ನೆಯ ಕಾರ್ಪೊರೇಟ್ ಕಚೇರಿಯಾಗಿದೆ. ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಸಿಗಲಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ’ ಎಂದಿದ್ದಾರೆ.

ರಾಜ್ಯವು 3.80 ಲಕ್ಷ ರೂ.ಗಳಿಗಿಂತ ಹೆಚ್ಚು ತಲಾ ಆದಾಯ ಹೊಂದಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿ.ಎಸ್.ಟಿ ಪಾವತಿ ಮೂಲಕ ದ್ವಿತೀಯ ಸ್ಥಾನದಲ್ಲಿದ್ದೇವೆ. ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳ ಒಳಗೆ ಕಾಣಿಸಿಕೊಂಡಿರುವ ದೇಶದ ಏಕೈಕ ನಗರ ಬೆಂಗಳೂರಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 14.6 ಮಿಲಿಯನ್ ಚದರ ಅಡಿ ಜಾಗವನ್ನು ಕೈಗಾರಿಕಾ ವಹಿವಾಟು ಉದ್ದೇಶಕ್ಕೆ ಭೋಗ್ಯಕ್ಕೆ ನೀಡಿದ್ದು, ನಾವು ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ದೇಶದಲ್ಲಿ ಒಟ್ಟು 900 ಜಿಸಿಸಿ ಕೇಂದ್ರಗಳಿದ್ದು, ಇವುಗಳ ಪೈಕಿ ಶೇ.35ರಷ್ಟು ಕರ್ನಾಟಕದಲ್ಲೇ ಇವೆ. ಇ-ಕಾಮರ್ಸ್ ವಹಿವಾಟಿಗೆ ಬೇಕಾದ ಮೂಲಸೌಕರ್ಯದಲ್ಲೂ ರಾಜ್ಯವು ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ 42.48 ಲಕ್ಷ ಟನ್ ದಾಸ್ತಾನು ಸಂಗ್ರಹಿಸುವಷ್ಟು ಉಗ್ರಾಣಗಳು ಮತ್ತು 233 ಶೀತಲಗೃಹಗಳಿವೆ. ಇದಕ್ಕೆ ತಕ್ಕಂತೆ ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.

ರಾಜ್ಯವು ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತೆ ಸರಕು ಸಾಗಣೆಗೆ ಪ್ರತ್ಯೇಕ ರೈಲು ಕಾರಿಡಾರ್, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕುಗಳ ಅಭಿವೃದ್ಧಿ, ಡ್ರೈಪೋರ್ಟ್ ನಿರ್ಮಾಣ ಮತ್ತು ಟ್ರಕ್ ಟರ್ಮಿನಲ್ಲುಗಳ ನಿರ್ಮಾಣವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಅಮೆಜಾನ್ ಮತ್ತು ಜಾಗತಿಕ ಮಟ್ಟದ ಇತರ ಕಂಪನಿಗಳು ರಾಜ್ಯದಲ್ಲಿರುವ ಈ ಕೈಗಾರಿಕಾಸ್ನೇಹಿ ಕಾರ್ಯಪರಿಸರದ ಲಾಭವನ್ನು ಪಡೆದುಕೊಳ್ಳಲು ನಮ್ಮಲ್ಲಿ ಹೆಚ್ಚುಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಇಲ್ಲೇ ಉತ್ಪಾದನೆ ಮಾಡಿ, ಜಗತ್ತಿನ ಉಳಿದ ಭಾಗಗಳಿಗೆ ಇಲ್ಲಿಂದ ರಫ್ತು ಮಾಡಬೇಕು ಎಂದು ಎಂ.ಬಿ ಪಾಟೀಲ್ ಪ್ರತಿಪಾದಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅಮೆಜಾನ್ ಕಂಪನಿಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಮತ್ತೋರ್ವ ಉಪಾಧ್ಯಕ್ಷ ಸಮೀರ್ ಕುಮಾರ್, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಮುಂತಾದವರು ಉಪಸ್ಥಿತರಿದ್ದರು.

ENGLISH SUMMARY..

Minister M.B. Patil Launches Amazon’s 11 Lakh Sq. Ft. Corporate Office

Bengaluru: Minister for Large and Medium Industries M.B. Patil on Monday inaugurated Amazon’s newly constructed, fully equipped corporate main office spread across 11 lakh square feet (1.1 million sq.ft.) at Vinayaka Nagara near Yelahanka.

Speaking on the occasion, he said, “This is Amazon’s 10th corporate office in the State. The company, which has shared a two-decade association with Karnataka, plans to invest 35 billion dollars in India over the next four years. This investment is expected to support 15 million small businesses and generate lakhs of employment opportunities. Karnataka will receive a significant share of this investment.”

He pointed out that Karnataka has an annual per capita income of over ₹3.80 lakh, ranking highest in the country. The State also stands second in annual GST contributions to the national exchequer, contributing ₹1.6 lakh crore. Bengaluru has climbed to the 21st position globally in the Global Innovation Index and is the only Indian city to feature among the top 30 in the Tech-Cities Index. Last year, the city recorded 14.6 million square feet of industrial leasing, the highest in the country, he noted.

Of the 900 Global Capability Centres (GCCs) in India, nearly 35 per cent are located in Karnataka. The State also leads in infrastructure required for e-commerce operations, with warehousing capacity of 42.48 lakh tonnes and 233 cold storage units. Correspondingly, e-commerce transactions in the State are growing at 11 per cent annually, he said.

To further promote industrial growth, projects such as dedicated freight rail corridors, multimodal logistics parks, dry ports and truck terminals have been planned, Patil urged Amazon and other global companies to leverage Karnataka’s industry-friendly ecosystem by enhancing their investments in the State, manufacturing here and exporting to global markets.

The event was attended by S. David Zapolsky, Senior Vice President, Global Public Policy, Amazon; Chetan Krishnaswamy, Vice President; Sameer Kumar, Vice President; and Sean Lee, Vice President, Global Real Estate, Amazon, among others.

Key words: Minister, MB Patil, inaugurates, Amazon, headquarters