ಮಂಡ್ಯ,ಫೆಬ್ರವರಿ,2,2026 (www.justkannada.in): ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯುತ್ತ), ಮಂಡ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು 2025-26 ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ದಾಖಲೆ ಸಮಯದಲ್ಲಿ ಮುಗಿಸಿ ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ.
ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ವೇಗವಾಗಿ ಫಲಿತಾಂಶ ನೀಡಿರುವುದು ಕಾಲೇಜಿನ ಪರಿಶ್ರಮದ ಹೆಗ್ಗುರುತಾಗಿದೆ. ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಫ್ ಎಸ್ ಐ, ಇ-ಕಾಮರ್ಸ್ ಪದವಿ ಪರೀಕ್ಷೆಗಳು ಕಳೆದ ಜನವರಿ 2 ರಿಂದ ಜನವರಿ 31ರವರೆಗೆ ನಡೆದಿದ್ದವು ಪರೀಕ್ಷೆಗಳು ಜನವರಿ 31 ರಂದು ಮುಕ್ತಾಯಗೊಂಡಿದ್ದು ಅದೇ ದಿನ ಸಂಜೆ 4:00 ಕ್ಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ವಿಶೇಷವೆಂದರೆ ಮೌಲ್ಯಮಾಪನ ಮುಗಿದ ಕೇವಲ ಒಂದು ಗಂಟೆಯಲ್ಲಿ (ಜನವರಿ 31ರ ಸಮಯ 5:00) ಕಾಲೇಜಿನ ಪ್ರಾಂಶುಪಾಲ ಪ್ರೊ. ಗುರುರಾಜ ಪ್ರಭು ಕೆ. ಅವರು ಫಲಿತಾಂಶವನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶಿಸ್ತುಬದ್ದ ಕೆಲಸ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ಈ ಅಸಾಧಾರಣ ಸಾಧನೆಯನ್ನು ನಮ್ಮ ಸರ್ಕಾರಿ ಪದವಿ ಕಾಲೇಜಿನಿಂದ ಸಾಧ್ಯವಾಗಿದೆ. ಈ ಕಾರ್ಯವನ್ನು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ರವಿಕಾಂತ್ ಲಂಬಾಣಿ ಅವರು ಮತ್ತು ತಂಡ ಪರೀಕ್ಷೆ ಆರಂಭದಿಂದ ಮುಕ್ತಾಯದವರೆಗೂ ಸತತ ಪರಿಶ್ರಮ, ತಾಳ್ಮೆ, ಜಾಣ್ಮೆ, ಅತ್ಯಂತ ಶಿಸ್ತಿನಿಂದ ಶ್ರಮಿಸಿದ ಫಲವಾಗಿ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಲು ಸಹಕಾರಿಯಾಯಿತು ಎಂದು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ರವಿಕಾಂತ್ ಲಮಾಣಿ, ಮೌಲ್ಯಮಾಪನ ಸಂಯೋಜಕ ಮಾದೇಗೌಡ ಎಂ., ಪರೀಕ್ಷಾ ಸಮಿತಿಯ ಸಂಚಾಲಕ ಡಾ. ಶಿವಕೀರ್ತಿ ವಿ, ಸಹ ಸಂಚಾಲಕ ಡಾ. ಶಿವರಾಮು ಎಸ್., ಪರೀಕ್ಷಾಂಗ ವಿಭಾಗದ ಸಿಬ್ಬಂದಿಗಳಾದ ಸಾಗರ್, ನವ್ಯಶ್ರೀ, ಪವಿತ್ರ, ಸಿಂಧೂಶ್ರೀ ಅವರನ್ನು ಶ್ಲಾಘಿಸಿದರು.
ಈ ರೀತಿಯ ಫಲಿತಾಂಶ ಪ್ರಕಟಣೆ ವಿದ್ಯಾರ್ಥಿಗಳು, ಕಾಲೇಜಿನ ಸರ್ವೋತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸುತ್ತೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುಗಮ ಓದಿಗೆ ಈ ಫಲಿತಾಂಶ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆಂದು ಸಂತಸ ವ್ಯಕ್ತಪಡಿಸಿದರು.
ಅನಂತರ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ರವಿಕಾಂತ್ ಲಮಾಣಿ ಅವರು ಮಾತನಾಡಿ ಈ ರೀತಿ ಮೌಲ್ಯಮಾಪನ ಮುಗಿದ ದಿನವೇ ಫಲಿತಾಂಶ ನೀಡಲು ಶ್ರಮಿಸಿದ ಪರೀಕ್ಷಾ ಸಮಿತಿಯ ಸಂಚಾಲಕರು, ಸದಸ್ಯರು, ಪರೀಕ್ಷಾಂಗ ವಿಭಾಗದ ಸಿಬ್ಬಂದಿಗಳು, ಮಂಡ್ಯ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ವಿವಿಧ ವಿಷಯಗಳ ಮೌಲ್ಯಮಾಪಕರು ಮತ್ತು ಕಾಲೇಜಿನ ಎಲ್ಲಾ ವಿಭಾಗಗಳ ಪರೀಕ್ಷಾ ಮಂಡಳಿ ಅಧ್ಯಕ್ಷರು ಮತ್ತು ಬೋಧಕರಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಫಲಿತಾಂಶವನ್ನು ಸಕಾಲದಲ್ಲಿ ಪ್ರಕಟಿಸುವ ಎಲ್ಲಾ ಸಿದ್ಧತೆಗಳನ್ನು ಕಾಲೇಜಿನ ವತಿಯಿಂದ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಫಲಿತಾಂಶಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇರುವಾಗ ನಮ್ಮ ಕಾಲೇಜು ಜನವರಿ 31 ರಂದು ಪರೀಕ್ಷೆ ಮುಗಿಸಿ ಅದೇ ದಿನ ಫಲಿತಾಂಶ ಬಂದಿರುವುದು ವಿದ್ಯಾರ್ಥಿ ಹಾಗೂ ಪೋಷಕರ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಪೋಷಕರೂ ಸಹ ಕಾಲೇಜಿನ ಈ ಪರಿಶ್ರಮಕ್ಕೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಈ ವೇಗವು ಕಾಲೇಜಿನ ಆಡಳಿತಾತ್ಮಕ ಮತ್ತು ಬೋಧಕರ ದಕ್ಷತೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಮೌಲ್ಯಮಾಪನ ಸಂಯೋಜಕ ಮಾದೇಗೌಡ ಎಂ. ಪರೀಕ್ಷಾ ಸಮಿತಿಯ ಸಂಚಾಲಕ ಡಾ. ಶಿವಕೀರ್ತಿ ವಿ, ಸಹ ಸಂಚಾಲಕ ಡಾ. ಶಿವರಾಮು ಎಸ್. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಕೆ.ಪಿ. ಮತ್ತು ಹೇಮಲತಾ ಎಸ್.ಪಿ. ಹಾಜರಿದ್ದರು.
Key words: Mandya, Women’s Government College, results, exams







