ಕುಟುಂಬಕ್ಕಿನ್ನು ಮಹಿಳೆಯೇ ಯಜಮಾನಿ!

ಕಾರವಾರ:ಜೂ-11: ಇನ್ನು ಕುಟುಂಬಕ್ಕೆ ಮಹಿಳೆಯೇ ಯಜಮಾನಿ! ಭಾರತೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಸೌಲಭ್ಯ ಒದಗಿಸಬೇಕಾದಲ್ಲಿ ಮಹಿಳೆಯೇ ಮನೆಯ ಯಜಮಾನಿ ಎಂದು ಪರಿಗಣಿಸಲು ಸೂಚಿಸಲಾಗಿದ್ದು, ಅದನ್ನು ಪಡಿತರ ಚೀಟಿಗಳಲ್ಲಿ ದಾಖಲಿಸುವ ಕಾರ್ಯವನ್ನು ಈಗ ಪ್ರಾರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಣ ಏನು?: ಈಗ ಗ್ಯಾಸ್ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾವಣೆ ಮಾಡುತ್ತಿರುವಂತೆ ಮುಂದೆ ಪಡಿತರದ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾವಣೆ ಮಾಡಲು ಚಿಂತಿಸಲಾಗುತ್ತಿದ್ದು, ಇದು ಜಾರಿಯಾದರೆ ಹಣ ಕುಟುಂಬದ ಮಹಿಳೆಗೆ ನೇರವಾಗಿ ಸಿಗಲಿದ್ದು, ಪುರುಷರು ಹಣ ದುರುಪಯೋಗ ಮಾಡುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.

ಮನೆಯಲ್ಲಿರುವ ಹಿರಿಯ ಮಹಿಳೆ ಯಜಮಾನಿ, ಪತಿ, ಮಕ್ಕಳನ್ನು ಇತರ ಸದಸ್ಯರನ್ನು ಗುರುತಿಸಬೇಕಿದೆ. ಮನೆಯಲ್ಲಿ ಮಹಿಳೆಯೇ ಇಲ್ಲ ಎಂದಾದಲ್ಲಿ ಮಾತ್ರ ಪುರುಷನೊಬ್ಬನನ್ನು ಯಜಮಾನ ಎಂದು ದಾಖಲಿಸಬಹುದಾಗಿದೆ. 2019ರಲ್ಲಿ ಮುದ್ರಣವಾಗಿ ಬಂದ ಪಡಿತರ ಚೀಟಿಗಳಲ್ಲಿ ಇದೇ ಮಾದರಿ ಅನುಸರಿಸಲಾಗಿದೆ. ಈ ಮೊದಲೇ ಇದ್ದ ಪಡಿತರ ಚೀಟಿಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲು ಇಲಾಖೆ ಈಗ ಮುಂದಾಗಿದೆ.

ಬೆರಳಚ್ಚು: ಎಲ್ಲ ಪಡಿತರ ಚೀಟಿದಾರರ ಬೆರಳಚ್ಚನ್ನು ದಾಖಲಿಸುವ (ಕೆವೈಸಿ)ಕಾರ್ಯವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆರಂಭಿಸಿದೆ. ಈಗಾಗಲೇ ರಾಜ್ಯದಾದ್ಯಂತ ಈ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಜುಲೈ ಅಂತ್ಯದೊಳಗೆ ಮುಗಿಸಲು ಸೂಚಿಸಲಾಗಿದೆ. ಅಷ್ಟರೊಳಗೆ ಎಲ್ಲ ಸದಸ್ಯರ ದಾಖಲೆ ನೀಡದಿದ್ದಲ್ಲಿ ಪಡಿತರ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ.

ಪಡಿತರ ವಿತರಣೆಯಲ್ಲಿನ ಸೋರಿಕೆ ತಡೆಗಟ್ಟಲು ಹೊಸದಾಗಿ ಕೆವೈಸಿ ದಾಖಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ದಾಖಲಾತಿಗೆ ಪಡಿತರದಾರ ಹಣ ಪಾವತಿಸಬೇಕಿಲ್ಲ. ಎಲ್ಲರ ಬೆರಳಚ್ಚು ಮುದ್ರಣ ಪಡೆದ ನಂತರ ಮಹಿಳೆಯನ್ನು ಮನೆಯ ಯಜಮಾನಿ ಎಂದು ಪರಿಗಣಿಸಿ ಹೊಸ ಕಾರ್ಡ್ ಮುದ್ರಿಸಿ ಕೊಡಲಾಗುವುದು.

| ಪುಟ್ಟಸ್ವಾಮಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ
ಕೃಪೆ:ವಿಜಯವಾಣಿ

women-will-get-the-status-of-head-of-family-in-ration-cards