ಇತ್ತೀಚೆಗೆ ಯುವ ಜನರಲ್ಲೂ ಹೆಚ್ಚುತ್ತಿರುವ ಹೃದ್ರೋಗ- ಜಯದೇವ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ ಕೆ.ಎಸ್. ಸದಾನಂದ.

ಮೈಸೂರು,ಡಿಸೆಂಬರ್,11,2021(www.justkannada.in):  ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಇಂದು ಯುವ ಜನರಲ್ಲೂ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ಮೈಸೂರಿನ ಜಯದೇವ ಹೃದ್ರೋಗ ವಿಜ್ಙಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ ಕೆ.ಎಸ್. ಸದಾನಂದ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಕೆಆರ್ ಎಸ್  ರಸ್ತೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬದಲಾಗುತ್ತಿರುವ ಜೀವನ ಶೈಲಿಯ ಜೊತೆಗೆ, ಶ್ರಮ ರಹಿತ ಬದುಕು, ದೇಹಕ್ಕೆ ಹೆಚ್ಚಿನ ವ್ಯಾಯಾಮ ಸಿಗದ ಪರಿಣಾಮ ಯುವ ಜನತೆಯಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿವೆ. ದೇಹದ ರಕ್ತದೊತ್ತಡ, ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದಲೂ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ ಎಂದು ಹೇಳಿದರು.

ಜಂಕ್ ಫುಡ್ ನ ಅತಿಯಾದ ಸೇವನೆಯೂ ಹೃದಯಕ್ಕೆ ಅಪಾಯಕಾರಿ ಆಗಿದೆ. ಹಾಗಾಗಿ ದೇಹಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಹೆಚ್ಚು ಚಳಿ ಇರುವಾಗ ಮನೆಯಿಂದ ಹೊರಗೆ ಹೋಗಬಾರದು. ಅತಿಯಾದ ಚಳಿಯ ವಾತಾವರಣ ಹೃದ್ರೋಗಿಗಳಿಗೆ ಅಪಾಯಕಾರಿ ಆಗಿರುವುದರಿಂದ ಅನಗತ್ಯವಾಗಿ ಶೀತದ ವಾತಾವರಣಕ್ಕೆ ಹೋಗಬಾರದು‌. ಹೃದಯಾಘಾತ ಹಠಾತ್ ಬರುವ ಖಾಯಿಲೆ. ವಿಪರೀತ ಬೆವರು, ತಲೆ ಸುತ್ತು, ಆಯಾಸ, ವಾಂತಿ ಮೊದಲಾದವು ಹೃದಯಾಘಾತದ ಲಕ್ಷ್ಮಣಗಳಾಗಿವೆ. ಹೃದಯಾಘಾತ ಆದಾಗ ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

160 ಪತ್ರಕರ್ತರಿಗೆ ತಪಾಸಣೆ

ಶಿಬಿರದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗದ 160ಕ್ಕೂ ಹೆಚ್ಚು ಪತ್ರಕರ್ತರು ತಪಾಸಣೆಗೆ ಒಳಗಾದರು. ಶಿಬಿರದಲ್ಲಿ ಬಿಪಿ, ಶುಗರ್, ರಕ್ತ ಪರೀಕ್ಷೆ, ಇಸಿಜಿ, ಎಕೋ ಹಾಗೂ ಅಗತ್ಯವಿದ್ದವರಿಗೆ ಟ್ರೆಡ್ ಮಿಲ್ ಟೆಸ್ಟ್ (TMT) ಜೊತೆಗೆ ನುರಿತ ವೈದ್ಯರಿಂದ ಸೂಕ್ತ ಸಲಹೆ, ಮಾರ್ಗದರ್ಶನ ಮಾಡಲಾಯಿತು. ಬೆಳಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆಎಸ್. ಸದಾನಂದ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ. ಎಂ.ಪಶುಪತಿ, ಪಿಆರ್ ಒಗಳಾದ ಚಂಪಕ ಮಾಲಾ, ವಾಣಿ ಮೋಹನ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹರೀಶ್ ಕುಮಾರ್, ಸಿಬ್ಬಂದಿಗಳಾದ ರಮೇಶ್, ಶರತ್, ತಾರಾ, ಪುನೀತ್, ಮಧು, ಮೀನಾಕ್ಷಿ, ಮೋಹಿನಿ, ಶಂಕರ್, ಕಾವ್ಯ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ ಗ್ರಾಮಾಂತರ ಕಾರ್ಯದರ್ಶಿ ಮಹದೇವ್, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಪತ್ರಕರ್ತರು ಹಾಜರಿದ್ದರು.

Key words: Lifestyle- change – increasing- heart disease- Mysore -District –Journalists- Association-Sri Jayadeva -Institute