ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಿ; ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ಪಾವತಿಗೆ ರೆಡಿಯಾಗಿ

ಬೆಂಗಳೂರು:ಜು-6:(www.justkannada.in) ತ್ಯಾಜ್ಯವಿಂಗಡಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿರುಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸೆ.1 ರಿಂದ ಹಸಿ ಕಸ, ಒಣ ಕಸಗಳನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲು ಮುಂದಾಗಿದೆ.

ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆ ರೂಪಿಸಿರುವ ಹೊಸ ಟೆಂಡರ್‌ ಪ್ರಕ್ರಿಯೆ, ಸೆ.1ರಿಂದ ಜಾರಿಗೆ ಬರಲಿದ್ದು, ಹಸಿ ಮತ್ತು ಒಣ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡದೆ ಹಾಗೇ ನೀಡಿದರೆ 100ರಿಂದ 500 ರೂ ವರೆಗೆ ಭಾರೀ ದಂಡ ಪಾವತಿಸಬೇಕು.

ಈ ಕುರಿತು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದು, ನಗರದಲ್ಲಿ ತ್ಯಾಜ್ಯ ವಿಂಗಡಣೆ ಪ್ರಮಾಣವನ್ನು ಶೇ 100ರಷ್ಟು ಸಾಧಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸೆ. 1ರಿಂದ ಗುತ್ತಿಗೆದಾರರು ಮನೆ- ಮನೆಗಳಿಂದ ಹಸಿ ಕಸವನ್ನು ಮಾತ್ರ ಸಂಗ್ರಹಿಸಿ, ಘಟಕಗಳಿಗೆ ಸಾಗಿಸಲಿದ್ದಾರೆ. ಯಾವುದೇ ಕಾರಣಕ್ಕೂ ಮಿಶ್ರ ಕಸ ಸ್ವೀಕರಿಸುವುದಿಲ್ಲ. ಒಬ್ಬ ಗುತ್ತಿಗೆದಾರನಿಗೆ ಐದು ವಾರ್ಡ್‌ಗಳ ಕಸ ಸಂಗ್ರಹದ ಟೆಂಡರ್‌ ನೀಡಲಾಗಿದೆ. ಗುತ್ತಿಗೆ ಅವಧಿ ಮೂರು ವರ್ಷವಾಗಿದೆ ಎಂದು ತಿಳಿಸಿದರು.

ಇನ್ನು ವಾರದ ಏಳು ದಿನವೂ ಹಸಿ ಕಸ ಸಂಗ್ರಹ ಮಾಡಲಾಗುತ್ತದೆ. ತ್ಯಾಜ್ಯ ವಿಂಗಡಿಸಿ ಕೊಡದವರಿಗೆ ಮೊದಲ ಸಲದ ತಪ್ಪಿಗೆ 100 ರೂ., ಎರಡನೇ ಬಾರಿಗೆ 500 ರೂ. ದಂಡ ಹಾಕಲಾಗುವುದು. ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡದಿದ್ದರೆ ಕ್ರಮವಾಗಿ 500 ರೂ. ಮತ್ತು 2500 ರೂ. ದಂಡ ವಿಧಿಸಲಾಗುವುದು. ಜನರು ಕಸವನ್ನು ವಿಂಗಡಿಸಿ ಕೊಟ್ಟರೂ, ಮಿಶ್ರಣ ಮಾಡಿಕೊಂಡು ಸಾಗಿಸುವ ಗುತ್ತಿಗೆದಾರರಿಗೆ 5000 ರೂ. ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಸ ವಿಂಗಡಿಸಿ ಕೊಡದವರ ಮನೆಗಳಿಗೆ ಲಿಂಕ್‌ ಕಾರ್ಯಕರ್ತರು ಮತ್ತು ಅಧಿಕಾರಿಗಳು ಭೇಟಿ ನೀಡಿ, ಅರಿವು ಮೂಡಿಸಲಿದ್ದಾರೆ. ಕಸ ವಿಂಗಡಿಸಿ ಕೊಡದವರು, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಲು 233 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ದೊರೆತಿದೆ. ಇವರೊಂದಿಗೆ ಆರೋಗ್ಯಾಧಿಕಾರಿಗಳು, ಆರೋಗ್ಯ ಪರಿವೀಕ್ಷಕರು ಸಹ ಕಾರ್ಯನಿರ್ವಹಿಸಲಿದ್ದಾರೆ. ದಂಡ ವಿಧಿಸಲು ಅಗತ್ಯವಿರುವ ಮೊಬೈಲ್‌ ಮಾದರಿಯ 500 ಯಂತ್ರ ಕಾರ್ಯನಿರ್ವಹಿಸಲಿದ್ದು, ನಿಯಮ ಉಲ್ಲಂಘಿಸುವವರ ಫೋಟೊ ತೆಗೆದು, ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಜಿಪಿಎಸ್‌ ವ್ಯವಸ್ಥೆ ಹೊಂದಿರುವ ಈ ಯಂತ್ರಗಳಿಂದ ಯಾವ ಪ್ರದೇಶದಲ್ಲಿ, ಎಷ್ಟು ದಂಡ ಹಾಕಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಕಚೇರಿಯಲ್ಲೇ ವೀಕ್ಷಿಸಬಹುದಾಗಿದೆ.

ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಿ; ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ಪಾವತಿಗೆ ರೆಡಿಯಾಗಿ
Zero tolerance for non-segregation of waste and plastic use,