ಮಾಜಿ ಸಿಎಂ ಹೆಚ್.ಡಿಕೆ ಮತ್ತು ಸಂಜಯ್ ಪಾಟೀಲ್ ಗೆ ಮಹಿಳಾ ಆಯೋಗ ನೋಟಿಸ್.

ಬೆಂಗಳೂರು, ಏಪ್ರಿಲ್​,15,2024 (www.justkannada.in): ಮಹಿಳೆಯರಿಗೆ ಅಪಮಾನ , ಘನತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತಂದ ಆರೋಪದಡಿ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್ ಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಇಬ್ಬರು ನಾಯಕರ ವಿರುದ್ದ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನೋಟಿಸ್​ ನೀಡಿದೆ. ಇಬ್ಬರೂ ನಾಯಕರು ಏಳು ದಿನಗಳೊಳಗೆ ಉತ್ತರ ನೀಡಬೇಕು ಎಂದು ಮಹಿಳಾ ಆಯೋಗ ಸೂಚಿಸಿದೆ.

ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಒಬ್ಬರು ಪೆಗ್ ಅಂತಾರೆ, ಮತ್ತೊಬ್ಬರು ಗ್ಯಾರಂಟಿ ಯೋಜನೆ ವಿಚಾರದಲ್ಲಿ ಮಹಿಳೆಯರನ್ನು ಅವಮಾನ ಮಾಡುತ್ತಾರೆ . ಮಹಿಳೆಯರ ಬಗ್ಗೆ ಕೀಳುಮಟ್ಟದ ಭಾಷೆ ಬಳಕೆ ಮಾಡಬಾರದು. ಗಂಭಿರ ಸ್ವರೂಪ ಪಡೆದ್ರೆ ಜೈಲು ಶಿಕ್ಷೆ ಆಗುತ್ತದೆ. ಹೆಣ್ಣುಮಕ್ಕಳಿಗೆ ಅವಮಾನ ಮಾಡಿದರೆ ಹೇಗೆ?ಎಂದು ವಾಗ್ದಾಳಿ ಮಾಡಿದರು.

ಏ.13 ರಂದು ಹಿಂಡಲಗಾದಲ್ಲಿ ನಡೆದಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್ ಮಾತನಾಡಿ, “ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ.‌ ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಎಕ್ಸ್‌ಟ್ರಾ ಪೆಗ್ ಹೆಚ್ಚುವರಿ ಕುಡಿಯಬೇಕು” ಎಂದು  ಹೇಳಿಕೆ ನೀಡಿದ್ದರು.

ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ತುಮಕೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ ಗ್ಯಾರಂಟಿಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು.

Key words: Women Commission, notice, HDK