ಮಂಗಳೂರು ಘಟನೆಯಲ್ಲಿ ಮೃತಪಟ್ಟವರು ಅಮಾಯಕರಲ್ಲ, ದೇಶಭಕ್ತರೂ ಅಲ್ಲ: ಪರಿಹಾರ ವಾಪಸ್ ಪಡೆಯುವಂತೆ ಸಿಎಂಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ….

ವಿಜಯಪುರ,ಡಿ,24,2019(www.justkannada.in): ಮಂಗಳೂರು ಪ್ರತಿಭಟನೆ ವೇಳೆ  ಮೃತಪಟ್ಟವರು ಅಮಾಯಕರಲ್ಲ, ದೇಶಭಕ್ತರಲ್ಲ. ಅವರಿಗೆ ನೀಡಲಾಗಿದ್ದ ಪರಿಹಾರ ವಾಪಸ್ ಪಡೆಯುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ವಿಜಯಪುರದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಮಂಗಳೂರಿನಲ್ಲಿ ಕರ್ನಾಟಕ ಪೊಲೀಸರು ಜಾಗೃತಿ ವಹಿಸಿ ಅನಾಹುತ ತಪ್ಪಿಸಿದ್ದಾರೆ, ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಪಿ ಎಫ್ ಐ ಸೇರಿದಂತೆ ದೇಶ ವಿರೋಧಿಗಳ ಕುಮ್ಮಕ್ಕು ಇದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿಗಳ ವರ್ತನೆ ನೋಡಿದ್ದೇವೆ.  ಘಟನೆಯನ್ನು ನಿಯಂತ್ರಿಸಲು ಗೋಲಿಬಾರ್ ಮಾಡಿದ್ದಾರೆ. ಮಂಗಳೂರು ಘಟನೆಯಲ್ಲಿ ಸತ್ತವರು ಅಮಾಯಕರಲ್ಲ, ದೇಶಭಕ್ತರಲ್ಲ. ಅವರಿಗೆ ಕೊಟ್ಟ 10 ಲಕ್ಷ ಪರಿಹಾರವನ್ನು ಸಿಎಂ ವಾಪಸ್ ಪಡೆಯಬೇಕು‌. ದೇಶಭಕ್ತರಿಗೆ, ಗೋ ರಕ್ಷಕರಿಗೆ ಪರಿಹಾರ ಕೊಡಬೇಕು. ಗಲಭೆಯಲ್ಲಿ ಬಂದವರಿಗೆ ಕೊಟ್ಟ ಪರಿಹಾರ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಚುನಾವಣೆಯಲ್ಲಿ ಬರ್ರಿ: ನಮಗೂ ತಾಕತ್ತಿದೆ ನಾವೂ ತೋರಿಸ್ತೀವಿ…

ಇದೇ ವೇಳೆ ಸಿದ್ದರಾಮಯ್ಯ ಮತ್ತು ಹೆಚ್.ಡಿ ಕೆ ವಿರುದ್ದ ಹರಿಹಾಯ್ದ ಬಸನಗೌಡ ಪಾಟೀಲ್ ಯತ್ನಾಳ್,  ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು ಅವರೇನು ಘನಂದಾರಿ ಕೆಲಸ ಮಾಡಿದ್ದಾರೆಂದು ಐದು ಲಕ್ಷ ಪರಿಹಾರ ಕೊಡ್ತಾರೆ ಕುಮಾರಸ್ವಾಮಿ?. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾದಾಮಿ ಬಿಟ್ಟು ಬಾರದ ಸಿದ್ದರಾಮಯ್ಯ, ಪ್ರಾಣ ಹೋದ್ರೂ ಪರವಾಗಿಲ್ಲ ಎಂದು ಸಿನಿಮಾ ಡೈಲಾಗ್ ಹೊಡೀತಾರೆ. ಹಿಂದೂಗಳು ಯಾರೂ ಇವರಿಗೆ ಓಟ್ ಹಾಕೆ ಇಲ್ಲವೆ? ಬರಿ ಮುಸ್ಲಿಂರೇ ಓಟ್ ಹಾಕಿದ್ದಾರಾ? ಮುಂದಿನ ಚುನಾವಣೆಯಲ್ಲಿ ಬರ್ರಿ, ಅವರ ಮತಗಳ ಮೇಲೆ ರಾಜಕೀಯ ಮಾಡ್ರಿ ನೋಡೋಣ. ನಮಗೂ ತಾಕತ್ತಿದೆ ನಾವೂ ತೋರಿಸ್ತೀವಿ ಎಂದು ಸವಾಲು ಹಾಕಿದರು.

ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಬೇಕು….

ಸಮಾಜಘಾತುಕರಿಗೆ ಬೆಂಬಲ ಕೊಡುವ ಎರಡೂ ರಾಜಕೀಯ ಪಕ್ಷಗಳ‌ ನಾಯಕರು ಪೊಲೀಸ್ ಇಲಾಖೆಗೆ ಕ್ಷಮೆ ಕೇಳಬೇಕು. ಯು. ಟಿ ಖಾದರ್ ಮೇಲೆ ತನಿಖೆ ಆಗಬೇಕಿದೆ, ಇದಕ್ಕೆಲ್ಲಾ ಅವರ ಕುಮ್ಮಕ್ಕು ಇರುವುದು ನೇರವಾಗಿ ಕಂಡು ಬಂದಿದೆ. ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಿರುವುದೇ ಯು ಟಿ ಖಾದರ್, ಅವರ ಮೇಲೆ ಸಮಗ್ರ ತನಿಖೆ ಆಗಬೇಕು. ದೇಶದ್ರೋಹಿಗಳಿಗೆ, ಗಲಭೆಗೆ ಕಾರಣರಾದವರ ಆಸ್ತಿ ಜಪ್ತಿ ಮಾಡಬೇಕು, ಸಾರ್ವಜನಿಕ ಆಸ್ತಿ ಹಾನಿ ಭರಿಸಬೇಕು. ಗಲಭೆ ಮಾಡೋರಿಗೆ, ದೇಶ ದ್ರೋಹಿಗಳಿಗೆ ಕುಮ್ಮಕ್ಕು ಕೊಡುವವರಿಗೆ ಗುಂಡಿಕ್ಕಿ ಕೊಲ್ಲಬೇಕು. ಗುಂಡು ಕೊಡದಿದ್ರೆ ದೇಶ ಉಳಿಯೋದಿಲ್ಲ. ಆಂತರಿಕ ಭಯೋತ್ಪಾದಕರು ಹಾಗೂ ದೇಶದ್ರೋಹಿಗಳ ಮೇಲೆ ತನಿಖೆ ಆಗಬೇಕು, ಅವರಿಗೆ ಶಿಕ್ಷೆ ಆಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Key words: vijaypur- Mangalore- incident –not innocent – MLA-Basnagouda Patil Yatnal -demands