ಮಳೆರಾಯ ಕೈ ಕೊಟ್ಟ ಹಿನ್ನೆಲೆ ಗಗನಕ್ಕೆರಿದ ತರಕಾರಿಗಳ ಬೆಲೆ: ಜನತೆ ಕಂಗಾಲು

ಮೈಸೂರು,ಮೇ,1,2024 (www.justkannada.in):  ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು ಜಲಾಶಯಗಳು ಭರ್ತಿಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಎದುರಾಗಿದ್ದು, ಇದೀಗ ತರಕಾರಿಗಳ ಬೆಲೆಯೂ ಏರಿಕೆಯಾಗಿ ಜನತೆ ಕಂಗಾಲಾಗಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಬೀನಿಸ್ ಕೆಜಿಗೆ 180 ರೂ. , ಸಪ್ಪಸಿಗೆ ಮತ್ತು ಮೆಂತ್ಯ ಸೊಪ್ಪು ಕಂತೆಗೆ 50 ರೂ. ಆಗಿದೆ. ಹೀಗೆ ತರಕಾರಿ ಬೆಲೆ ಏರಿಕೆಗೆ ಮೈಸೂರಿನ ಜನತೆ ತತ್ತರಿಸಿದ್ದಾರೆ.

ಮಳೆಯಿಲ್ಲದೇ ಸರಿಯಾಗಿ ಬೆಳೆಯೂ ಆಗದೆ ರೈತರೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ  ಪ್ರತಿನಿತ್ಯ ತರಕಾರಿಗಳ ಬೆಲೆ ಏರಿಕೆಯಾಗುತ್ತಿದ್ದು, ದಿನ ನಿತ್ಯದ ಅಡುಗೆಗೆ ತರಕಾರಿ ಬಳಸಲೇಬೇಕು. ಒಂದು ಕೆಜಿ ಕೊಳ್ಳುವವರು ಈಗ  ಅರ್ಧ ಕೆ.ಜಿ  ಕೊಡಿ ಅಂತಾರೆ. ಮದುವೆ ಸಮಾರಂಭಕ್ಕೆ ಅನಿವಾರ್ಯ ಕಾರಣ ಹೆಚ್ಚಿನ ಬೆಲೆಯಾದರೂ ಸರಿ ಕೊಂಡುಕೊಳ್ಳುತ್ತಾರೆ. ಮಳೆ ಆಗದೆ ಇರುವುದಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆ ಹೆಚ್ಚಾಗಿದೆ. ಇದೆ ರೀತಿ ಪರಿಸ್ಥಿತಿ ಮುಂದುವರೆದರೆ ತರಕಾರಿಗಳು ಸಿಗೋದೇ ಕಷ್ಟ ಆಗುತ್ತದೆ. ರೈತರಿಗೂ ಹೆಚ್ಚಿನ ಲಾಭ ಸಿಗುತ್ತಿಲ್ಲ ಎಂಬುದು ಎಂಜಿ ರಸ್ತೆಯಲ್ಲಿರುವ ತರಕಾರಿ ವ್ಯಾಪಾರಸ್ಥರ ಅಳಲು.

ಈ ಬಾರಿಯಾದರೂ ಮಳೆರಾಯ ಕೃಪೆ ತೋರಿ  ರೈತರ ಮತ್ತು ಜನರ ಮುಖದಲ್ಲಿ ಮಂದಹಾಸ ತರುತ್ತಾನೋ ಇಲ್ಲವೋ ಕಾದು ನೋಡಬೇಕಿದೆ.

Key words: vegetables, prices, rise, mysore