Wednesday, September 16, 2026

BDA Apartments

Home Front Page ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ: ಪ್ರತ್ಯೇಕ ಕಾಯ್ದೆ ರೂಪಿಸಲು ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ

ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ: ಪ್ರತ್ಯೇಕ ಕಾಯ್ದೆ ರೂಪಿಸಲು ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ

ಉಪ ಮುಖ್ಯಮಂತ್ರಿಗೆ ಕಾಯ್ದೆ ಕುರಿತು ವರದಿ ಸಲ್ಲಿಸಿದ ಡಾ.ಸಡಗೋಪನ್‌ ನೇತೃತ್ವದ ಸಮಿತಿ
ಬೆಂಗಳೂರು: ಪ್ರತಿಷ್ಠಿತ ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು (UVCE) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆಯ ಅಗತ್ಯವಿದ್ದು, ಅದಕ್ಕೆ ಬೇಕಾದ ವಿಧೇಯಕವನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಯುವಿಸಿಇ ಕಾಯ್ದೆಯನ್ನು ರೂಪಿಸುವ ನಿಟ್ಟಿನಲ್ಲಿ ವಿವಿಧ ಐಐಟಿಗಳು ಹಾಗೂ ಐಐಎಂಗಳ ಕಾಯ್ದೆಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಸಮಗ್ರ ವರದಿಯನ್ನು ಐಐಐಟಿಬಿ ನಿರ್ದೇಶಕ ಡಾ.ಸಡಗೋಪನ್‌ ನೇತೃತ್ವದ ಸಮಿತಿಯಿಂದ ಸ್ವೀಕರಿಸಿದ ನಂತರ ಮಾತನಾಡಿದ ಡಿಸಿಎಂ, ನಮ್ಮ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಯುವಿಸಿಇ ಅನ್ನು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆಯ ಅಗತ್ಯವಿದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುವ ಬಗ್ಗೆ ಸರಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿರುವ ಸಮಿತಿಯು, ಸಂಸ್ಥೆಗೆ ಮೀಸಲಾದ ಪ್ರತ್ಯೇಕ ಹಾಗೂ ವಿಶೇಷ ಕಾಯ್ದೆ ಅಗತ್ಯ ಇರುವುದನ್ನು ಒತ್ತಿ ಹೇಳಿದೆ. ಅದರಂತೆ ಅಗತ್ಯವಾದ ಕಾನೂನು, ಆಡಳಿತಾತ್ಕಕ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದರು.

ಉದ್ದೇಶಿತ ವಿಧೇಯಕದಲ್ಲಿರುವ ಅಂಶಗಳೇನು?

*ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸರಕಾರದ ಮೇಲೆ ಅವಲಂಬನೆ ತಗ್ಗಿಸಲು ಆರ್ಥಿಕ ಮಾದರಿಯನ್ನು ಸಿದ್ಧಪಡಿಸಿಕೊಂಡು ಆಂತರಿಕವಾಗಿ ಹಾಗೂ ಬಾಹ್ಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶ ನೀಡಬೇಕು. ದೇಣಿಗೆ ಸ್ವೀಕಾರ, ಹಳೆಯ ವಿದ್ಯಾರ್ಥಿಗಳಿಂದ ಹಣಕಾಸು ನೆರವು ಪಡೆಯುವ ಅಂಶವು ಉದ್ದೇಶಿತ ವಿಧೇಯಕದಲ್ಲಿದೆ ಎಂದರು ಡಿಸಿಎಂ.

*ಅತ್ಯುತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು. ಅವರಿಗೆ ಉತ್ತಮ ವೇತನ ನೀಡಬೇಕಿದೆ. ಜತೆಗೆ ಟ್ಯೂಷನ್ ಫೀ ನಿಗದಿ ಮಾಡುವ ಅಧಿಕಾರವನ್ನು ಯುವಿಸಿಇಗೇ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು ಎಂದ ಅಂಶವೂ ಸೇರಿದೆ ಎಂದು ಡಿಸಿಎಂ ತಿಳಿಸಿದರು.

*ಉತ್ಕೃಷ್ಟ ಶೈಕ್ಷಣಿಕ ಹಿನ್ನೆಲೆಯ ಬೋಧಕರ‌ ನೇಮಕ, ಸಂಶೋಧನೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದು, ಹೊಸ ರೀತಿಯ ಪಠ್ಯವನ್ನು ಸೇರ್ಪಡೆಗೊಳಿಸುವ ಹಾಗೂ ಹೊಸ ಕೋರ್ಸುಗಳನ್ನು ಆರಂಭಿಸಲು ಯುವಿಸಿಇಗೆ ಪೂರ್ಣ ಸ್ವಾಯತ್ತತೆ ಕೊಡಬೇಕು.

*ಆಡಳಿತದಲ್ಲಿ ಯುವಿಸಿಇಗೆ ಪೂರ್ಣ ಅಧಿಕಾರ ನೀಡುವುದರ ಜತೆಗೆ ಸ್ವತಂತ್ರ ಅಸ್ತಿತ್ವ ನೀಡಬೇಕು. ಒಟ್ಟಾರೆ ಮಾಲೀಕತ್ವ ಸರಕಾರದ್ದೇ ಆಗಿದ್ದರೂ ಆಡಳಿತದಲ್ಲಿ ಯುವಿಸಿಇಯದ್ದೇ ಅಂತಿಮ ನಿರ್ಧಾರವಾಗಬೇಕು. 11 ಸದಸ್ಯರ ಆಡಳಿತ ಮಂಡಳಿಯಲ್ಲಿ ಸರಕಾರಕ್ಕೂ ಸಮಾನ ಪ್ರಾತಿನಿಧ್ಯ ಇರುತ್ತದೆ. ಸರಕಾರ, ಕೈಗಾರಿಕೆ, ಶೈಕ್ಷಣಿಕ ವಲಯದಿಂದ ತಲಾ ಮೂವರು ಸದಸ್ಯರು, ಹಳೆಯ ವಿದ್ಯಾರ್ಥಿಗಳಿಂದ ಇಬ್ಬರು ಸದಸ್ಯರು ಇರಬೇಕು. ಈ ಅಂಶವೂ ಪ್ರಸ್ತಾವಿತ ವಿಧೇಯಕದಲ್ಲಿ ಇರುತ್ತದೆಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಕ್ಯಾಂಪಸ್‌ಗೆ ಭೇಟಿ ಮತ್ತು ಪರಿಶೀಲನೆ

ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಸಮಿತಿಯ ಸದಸ್ಯರೊಂದಿಗೆ ಕೆ.ಆರ್.ವೃತ್ತದಲ್ಲಿರುವ ಯುವಿಸಿಇ ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಇತ್ಯಾದಿ ಅಂಶಗಳ ಬಗ್ಗೆ ಸಮಿತಿ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಡಾ.ಎಸ್.ಸಡಗೋಪನ್, ಸಮಿತಿ ಸದಸ್ಯರಾದ ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್, ಬಿ. ಮುತ್ತುರಾಮನ್, ಪ್ರಶಾಂತ್ ಪ್ರಕಾಶ್ ನಾಗಾನಂದ ದೊರೆಸ್ವಾಮಿ, ನಾರಾಯಣನ್‌ ಮುಂತಾದವರು ಡಿಸಿಎಂ ಜತೆಯಲ್ಲಿದ್ದರು.