Friday, August 14, 2026

BDA Apartments

Home Front Page ಅನ್ ಲಾಕ್: ಹೊರಗಿನಿಂದ ಬರುವ ಎಲ್ಲರಿಗೂ ಟೆಸ್ಟಿಂಗ್ ಮಾಡಿ- ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತ ಸೂಚನೆ.

ಅನ್ ಲಾಕ್: ಹೊರಗಿನಿಂದ ಬರುವ ಎಲ್ಲರಿಗೂ ಟೆಸ್ಟಿಂಗ್ ಮಾಡಿ- ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತ ಸೂಚನೆ.

ಬೆಂಗಳೂರು,ಜೂನ್,14,2021(www.justkannada.in): ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿನಿಂದ ಲಾಕ್‌ ಡೌನ್ ಸಡಿಲಿಕೆಯಾಗಿದ್ದು, ಹಲವು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕೂಲಿ ಕಾರ್ಮಿಕರು ಸೇರಿದಂತೆ ಬಹುತೇಕ ಮಂದಿ ನಗರಕ್ಕೆ ಬರುತ್ತಿದ್ದಾರೆ. ಆದ್ದರಿಂದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಚೆಕ್ ಪೋಸ್ಟ್, ಹೊರವಲಯಗಳಲ್ಲಿ ಬರುವ ಟೋಲ್ ಗಳಲ್ಲಿ ಟೆಸ್ಟಿಂಗ್ ತಂಡಗಳನ್ನು ನಿಯೋಜಿಸಿ ಹೆಚ್ಚು-ಹೆಚ್ಚು ಟೆಸ್ಟಿಂಗ್ ಮಾಡಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.jk

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡುವ ಸಂಬಂಧ ಇಂದು ವರ್ಚುವಲ್ ಮೂಲಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ , ನಗರದಲ್ಲಿ ಲಾಕ್‌ ಡೌನ್ ಮಾಡಿದ್ದ ಹಿನ್ನೆಲೆ ಪಾಸಿಟಿವಿಟಿ ರೇಟ್ ಬಹುತೇಕ ಕಡಿಮೆಯಾಗಿದ್ದು, ಕೋವಿಡ್ ಸೋಂಕಿತರು ಆಸ್ಪತ್ರೆಗಳಿಗೆ ಹೋಗುವ ಸಂಖ್ಯೆ, ಕೋವಿಡ್ ಸೋಂಕಿನಿಂದ ಸಾಯುವ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಈ ಸಂಬಂಧ ನಗರದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಎಲ್ಲರೂ ತಪ್ಪದೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಹೊರಗಿನಿಂದ ಬರುವವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ಲಾಕ್ ಪ್ರಕ್ರಿಯೆಗೆ ಬೆಂಗಳೂರು ಸಜ್ಜಾಗುತ್ತಿದ್ದು, ಕೋವಿಡ್-19 ನಿಯಂತ್ರಿಸಬೇಕಾದರೆ ಮುಂದಿನ ದಿನಗಳಲ್ಲಿ ಎಲ್ಲರೂ ಜಾಗರೂಕರಾಗಿರಬೇಕು ಎಂದು  ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸುವುದರಿಂದ ಹಾಗೂ  ಶಿಸ್ತುಬದ್ಧವಾಗಿದ್ದರೆ ಕೋವಿಡ್-19 ವಿರುದ್ಧದ ಈ ಹೋರಾಟದ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನಗರದಲ್ಲಿ ಕೋವಿಡ್ 19 ಪರೀಕ್ಷೆ, ಕಂಟೈನ್ಮೆಂಟ್ ಮತ್ತು ಪ್ರತ್ಯೇಕತೆಯನ್ನು ತೀವ್ರಗೊಳಿಸಲಾಗುತ್ತಿದೆ. ಮತ್ತು ನಗರದ ಪ್ರತಿಯೊಬ್ಬ ವಯಸ್ಕರಿಗೆ ಲಸಿಕೆ ಮತ್ತು ಕೋವಿಡ್ ನಿಂದ ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 360ಡಿಗ್ರಿ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದ್ದಾರೆ.  ಆದರೆ, ಪ್ರಕರಣಗಳು ಮತ್ತೆ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಜಾಗೃತಿ ನಾಗರಿಕರ ಮೇಲಿದೆ ಎಂದು ಗೌರವ್ ಗುಪ್ತ  ಹೇಳಿದರು.

ನಗರದಲ್ಲಿ ಹಾಸ್ಟೆಲ್, ಪಿಜಿ(ಪೇಯಿಂಗ್ ಗೆಸ್ಟ್), ಕಟ್ಟಡ ನಿರ್ಮಾಣ ಸ್ಥಳದ ಬಳಿ, ಕಾರ್ಖಾನೆಗಳ ಬಳಿ ತೆರಳಿ ಎಲ್ಲರಿಗೂ ಟೆಸ್ಟಿಂಗ್ ಮಾಡಬೇಕು. ಜೊತೆಗೆ ಅಪಾರ್ಟ್ಮೆಂಟ್ಸ್ ಗಳಿಗೆ ಹೊರಗಿನಿಂದ ಬರುವವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಆರ್.ಡಬ್ಲ್ಯೂ.ಎಗಳಿಗೆ ಸೂಚನೆ ನೀಡಬೇಕು. ಎಲ್ಲಾ ಆರೋಗ್ಯಾಧಿಕಾರಿಗಳು ಕೋವಿಡ್ ನಿಯಂತ್ರಿಸುವ ಸಂಬಂಧ ಪರಿಣಾಮಕಾರಿಯಾಗಿ ಕೆಲೆಸ ಮಾಡಬೇಕು. ಕೋವಿಡ್ ಲಕ್ಷಣಗಳಿರುವವರಿಗೆ ಟೆಸ್ಟಿಂಗ್ ಮಾಡಬೇಕು. ಕಂಟೈನ್ಮೆಂಟ್ ಸರಿಯಾಗಿ ಮಾಡಬೇಕು, ಕೋವಿಡ್ ಸೋಂಕು ದೃಢಪಟ್ಟವರು ತಪ್ಪದೆ ಐಸೋಲೇಟ್ ಆಗಬೇಕು ಎಂದು ತಿಳಿಸಿದರು.

ವ್ಯಾಕ್ಸಿನೇಷನ್ ನೀಡುವ ಪ್ರಕ್ರಿಯೆ:

ನಗರದಲ್ಲಿ 44 ವರ್ಷ ಮೇಲ್ಪಟ್ಟವರು ಹಾಗೂ 18 ರಿಂದ 44 ವರ್ಷದವರಿಗೆ ಇದುವರೆಗೆ 40,39,744 ಮಂದಿಗೆ ವ್ಯಾಕ್ಸಿನೇಷನ್ ನೀಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್ ಕಾರ್ಯ ಸರಿಯಾಗಿ ಆಗಬೇಕು. ಈ ಸಂಬಂಧ 45 ವರ್ಷ ಮೇಲ್ಪಟ್ಟವರು, 18 ರಿಂದ 44 ವಯೋಮಾನದವರೆಲ್ಲರಿಗೂ ಲಸಿಕೆ ನೀಡಬೇಕು. 44 ವರ್ಷ ಮೇಲ್ಪಟ್ಟವರು ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯದವರಿಗೆ 1912 ಮೂಲಕ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ತಿಳಿಸಬೇಕು. ಜೊತೆಗೆ ಮನೆ-ಮನೆ ಸಮೀಕ್ಷೆ ಮಾಡಿ ಲಸಿಕೆ ಪಡೆಯದವರಿಗೆ ಲಸಿಕೆ ಪಡೆಯಲು ತಿಳಿಸಬೇಕು. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಎಸಿಟಿ ಮೂಲಕ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಪಡೆಯುಲು ಅರ್ಹರಿರುವ ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡಬೇಕು ಎಂದು ಗೌರವ್ ಗುಪ್ತ ತಿಳಿಸಿದರು.

3ನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಅಲೆ ಸಲುವಾಗಿ ಎಲ್ಲಾ ರೀತಿಯ ಸಿದ್ಧ್ದತೆಗಳನ್ನು ಮಾಡಿಕೊಳ್ಳಬೇಕು. ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಏನೆಲ್ಲಾ ಅವಶ್ಯಕತೆಯಿದೆ ಅವುಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಮುಖ್ಯ ಆಯುಕ್ತರು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರು(ಆರೋಗ್ಯ) ಶ್ರೀ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Unlock-covid Test – everyone- coming – outside-BBMP Chief Commissioner- Gaurav gupta