ಇಂದು ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ: ಪೊಲೀಸ್ ಬಿಗಿ ಭದ್ರತೆ , ಮದ್ಯಮಾರಾಟ ಬಂದ್

ಮಂಗಳೂರು ಫೆಬ್ರವರಿ 11,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಅಮಿತ್‌ ಶಾ ಅವರನ್ನು ಸ್ವಾಗತಿಸಲು ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.ಪುತ್ತೂರಿಗೆ ಭೇಟಿ ನೀಡುತ್ತಿರುವ ಅಮಿತ್‌ ಶಾ ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್‌ (ಕ್ಯಾಂಪ್ಕೊ) ನ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಂದು ಮಧ್ಯಾಹ್ನ 2.15 ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್‌ ಶಾ ಮಧ್ಯಾಹ್ನ 2.45 ಕಣ್ಣೂರಿನಿಂದ ಬಿಎಸ್‌ಎಫ್‌ ಹೆಲಿಕಾಪ್ಟರ್‌ ಮೂಲಕ ಪುತ್ತೂರಿನ ಈಶ್ವರ ಮಂಗಲ ದೇವಾಲಯಕ್ಕೆ ಆಗಮಿಸಲಿದ್ದಾರೆ. ದೇವಸ್ಥಾನಕ್ಕೆ ಬೇಟಿ ನೀಡಿದ ಬಳಿಕ ಅಮಿತ್‌ ಶಾ 3.35 ಹೆಲಿಕಾಪ್ಟರ್‌ ಮೂಲಕ ಈಶ್ವರ ಮಂಗಲದಿಂದ ಪುತ್ತೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.40: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 6:15 ರಿಂದ 8:00ರವರೆಗೆಬಿಜೆಪಿ ಪ್ರಮುಖ ನಾಯಕರೊಂದಿಗೆ ಆಂತರಿಕ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ರಾತ್ರಿ 8:15 ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮತ್ತೆ ದೆಹಲಿಗೆ ವಾಪಸ್‌ ಆಗಲಿದ್ದಾರೆ.

Key words: Union Home Minister -Amit Shah – Puttur- today