ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ‘ಶಿವಶಕ್ತಿ ಪಾಯಿಂಟ್’ ಹೆಸರು : ಆ.23 ‘ರಾಷ್ಟ್ರೀಯ ಬಾಹ್ಯಾಕಾಶ ದಿನ- ಪ್ರಧಾನಿ ಮೋದಿ ಘೋಷಣೆ

ಬೆಂಗಳೂರು,ಆಗಸ್ಟ್,26,2023(www.justkannada.in):  ಚಂದ್ರಯಾನ-3 ಯಶಸ್ವಿಯದ ಹಿನ್ನೆಲೆ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಹೆಸರು  ಹಾಗೂ ಆಗಸ್ಟ್ 23 ದಿನವನ್ನ ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.

ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ರ ಯಶಸ್ಸಿನಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಚಂದ್ರಯಾನ-3 ಯೋಜನೆ ಯಶಸ್ವಿಯಾದ, ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವನ್ನು, ಅಂದರೆ ಆಗಸ್ಟ್ 23 ಅನ್ನು ಇನ್ನು ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಚಂದ್ರಯಾನ-2 ಪತನ ಸ್ಥಳಕ್ಕೆ ‘ತಿರಂಗ ಪಾಯಿಂಟ್,  ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ನಾಮಕರಣ ಮಾಡಿದ ಪ್ರಧಾನಿ ಮೋದಿ, ಈ ತಿರಂಗ ಪಾಯಿಂಟ್​​​ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಚಂದ್ರನವರೆಗೂ ತಲುಪಿದೆ. ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು. ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗ್ತಿದೆ. ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ಹೇಳಿದರು.

Key words: Modi -declared – spot – Chandrayaan-3- lunar lander -Shiva Shakti Point