ಮೈಸೂರು, ಮಾರ್ಚ್,19,2021(www.justkannada.in): ಸಮಾಜದಲ್ಲಿ ಮಹಿಳೆ ಮತ್ತು ಪುರುಷರ ಸಂಖ್ಯೆಯ ಸಮತೋಲನವನ್ನು ಕಾಪಾಡಿಕೊಳ್ಳುವ ಕೆಲಸವಾಗಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು.
ಶುಕ್ರವಾರ ನಗರದ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪಲ್ಲವಿ ಹೊನ್ನಾಪುರ ಅವರು ಮಾತನಾಡಿದರು.
2018ರ ಸ್ಯಾಂಪಲ್ ರೆಜಿಸ್ಟ್ರೇಶನ್ ಸಿಸ್ಟಮ್ ಸ್ಟ್ಯಾಟಿಸ್ಟಿಕಲ್ ವರದಿ ಪ್ರಕಾರ ಜನನದ ಸಂದರ್ಭದಲ್ಲಿ ಮಹಿಳೆಯರ ಮತ್ತು ಪುರುಷರ ಜನಸಂಖ್ಯೆ ಗಮನಿಸಿದಾಗ, ಪ್ರತಿ ಸಾವಿರ ಪುರುಷರಿಗೆ ಕೇವಲ 899 ಮಹಿಳೆಯರು ಇರುವುದು ಕಂಡುಬಂದದಿದೆ. ಸಂತಾನೋತ್ಪತ್ತಿ ಕ್ಷಮತೆಯಲ್ಲಿ ಕೂಡ ಇಳಿಮುಖ ಕಂಡುಬಂದಿದ್ದು, ಇದು ಭವಿಷ್ಯದಲ್ಲಿ ಲಿಂಗಾನುಪಾತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.
ಮಹಿಳೆಯರು ಇಂದಿಗೂ ಹಲವಾರು ವಿಚಾರಗಳಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡುವ ಅಗತ್ಯವಿದೆ ಎಂದ ಅವರು, ಸಮಾನ ಸ್ಥಾನಮಾನಗಳಿಗೆ ಹೋರಾಡುವ ಮಹಿಳೆಯರು ಅವಕಾಶ ಸಿಕ್ಕಾಗ ಅದನ್ನು ನಿಭಾಯಿಸುವ ಕ್ಷಮತೆಯನ್ನೂ, ಮನಸ್ಥಿತಿಯನ್ನೂ ಬೆಳೆಸಿಕೊಳ್ಳಬೇಕು ಎಂದರು.
ಮಹಿಳೆಯರಿಗೆ ಕೇವಲ ಸರ್ಕಾರದ ಮಟ್ಟದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿಗಳನ್ನು ನೀಡಿ ಮುಖ್ಯವಾಹಿನಿಗೆ ತರುವುದು ಮಾತ್ರವಲ್ಲ, ಪ್ರತಿ ಕುಟುಂಬದಲ್ಲೂ ಸಮಾನ ಅವಕಾಶ, ಅಭಿವ್ಯಕ್ತಿ ಸ್ವಾತಂತ್ರ್ಯ, ನಿರ್ಧಾರಗಳಲ್ಲಿ ಮಣ್ಣನೆ, ಪ್ರೀತಿ ಗೌರವಗಳು ಸಿಗುವಂತಾಗಬೇಕು. ಪುರುಷರು ಸಮಾಜದಲ್ಲಿ, ವೃತ್ತಿಯಲ್ಲಿ ನೀಡುವ ಕೊಡುಗೆಗೆ ಸಿಗುವ ಮಣ್ಣನೆ ಗೌರವ ಮಹಿಳೆಯ ಕೊಡುಗೆಗೂ ಸಿಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾಜದಲ್ಲಿ ಪುರುಷರಿಗೆ ಸಮನಾಗಿ ಬದುಕಲು ಮಹಿಳೆಯರಿಗೆ ನ್ಯಾಯಯುತ ಸಮಾನತೆಯ ಪರಿಸರ ಸೃಷ್ಠಿಯಾಗಬೇಕು. ಇದಕ್ಕಾಗಿ ಪ್ರತಿ ಕುಟುಂಬದಲ್ಲೂ ಗಂಡು ಮಕ್ಕಳನ್ನು ಹೆಣ್ಣು ಮಕ್ಕಳಂತೆ ಸಹನೆ, ಸಹಿಷ್ಣುತೆ, ಸಂವೇದನೆ ರೂಢಿಸಿಕೊಳ್ಳುವಂತೆ, ತನ್ನಷ್ಟೇ ತನ್ನ ಸಹೋದರಿಯನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಬೆಳಸುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ವಿಫುಲ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
Key words: maintain balance number -women –men-mysore-Pallavi Honnapur-Senior Assistant Director – Department of Information and Public Relations