ಬಸ್ ಶೆಲ್ಟರ್ ವಿವಾದ: ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ನವೆಂಬರ್,18,2022(www.justkannada.in):  ಮೈಸೂರಿನಲ್ಲಿ  ಗುಂಬಜ್ ಮಾದರಿಯ ಬಸ್ ಶೆಲ್ಟರ್ ವಿವಾದಕ್ಕೆ ಸಂಬಂಧಿಸಿದಂತೆ  ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ , ಮೈಸೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸ್ವಪಕ್ಷದ ಸಂಸದ ಮತ್ತು ಶಾಸಕರು ಮೈಸೂರಿನ ಮರ್ಯಾದೆಯನ್ನ ಹರಾಜು ಹಾಕ್ತಾ ಇದ್ದಾರೆ. ಸಂಸದ ಪ್ರತಾಪ್ ಸಿಂಹ ಕೊಡುಗೆ ಮೈಸೂರಿಗೆ ಏನೂ ಇಲ್ಲ. ಬರಿ ಆಶ್ವಾಸನೆ ಕೊಡುವುದರಲ್ಲಿ ಕಾಲ ಕಳೆದಿದ್ದಾರೆ. ಮೈಸೂರಿಗೆ ಹೊಸ  ರೈಲ್ವೆ ಟರ್ಮಿನಲ್ ತರುತ್ತೇನೆ ಎಂದು ೨೦೧೭ ರಲ್ಲೇ ಹೇಳಿದರು, ಏರ್ ಪೋರ್ಟ್ ವಿಸ್ತರಣೆ ಮಾಡುತ್ತೇನೆ ಎಂದಿದ್ದರು ಅದೂ ಆಗಿಲ್ಲ. ಕುಶಾಲನಗರಕ್ಕೆ ರೈಲು ಬಿಡ್ತಿನಿ ಎಂದಿದ್ದರು. ದಸರಾಗೂ ಮುಂಚೆ ಬೆಂಗಳೂರು ಮೈಸೂರು ದಶಪಥ ರಸ್ತೆ ಕಾಮಗಾರಿ ಮುಗಿಯುಸತ್ತೇನೆ ಎಂದಿದ್ದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅದೂ ಕೂಡ ಮುಗಿದಿಲ್ಲ. ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು  ಬಸ್ ಶೆಲ್ಟರ್ ವಿಚಾರ ತೆಗೆದುಕೊಂಡು ಸಣ್ಣ ವಿಚಾರವನ್ನ ದೊಡ್ಡದು ಮಾಡಿ ಸಮಾಜದ ಶಾಂತಿ ಕದಡುತ್ತಿದ್ದಾರೆ. ನೀವು ಕೇವಲ ಬಿಜೆಪಿಯವರಿಗೆ ಸಂಸದರಲ್ಲ 35  ಲಕ್ಷ ಜನರಿಗೆ ನೀವು ಪ್ರತಿನಿಧಿ. ಎಂದು ಗುಡುಗಿದರು.

ಗುಂಬಜ್ ಮಾದರಿಯ ಕಟ್ಟಡ ಕಟ್ಟಬಾರದು ಅಂಥ ನಿಮ್ಮ ಕೇಂದ್ರದ ನಿರ್ದೇಶನ ಇದೆಯಾ..? ಸಂವಿಧಾನದಲ್ಲಿ ಕಾನೂನು ಇದೆಯಾ..? ಒಡೆದು ಹಾಕುತ್ತೇನೆ ಅಂದಿದ್ರಿ ಒಡೆದು ಹಾಕಿ ನೋಡೋಣ. ನಿಮ್ಮ ಧಮ್ಮ ತಾಕತ್ತು ತೋರಿಸಿ ಈಗ. ನೀವು ಕೊಟ್ಟ ಗಡುವು ಮುಗಿದಿದೆಯಲ್ಲ ಹೋಗಿ ಒಡಿರಿ ನೋಡೋಣ. ಪ್ರಚೋದನಕಾರಿ ಹೇಳಿಕೆ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತೀರಾ. ನಾಳೆ ಜನ ನಿಮಗೆ ಕಲ್ಲು ತಗೋಂಡು ಹೊಡಿತಾರೆ. ಮುಸ್ಲೀಮರನ್ನೇ ಟಾರ್ಗೆಟ್ ಮಾಡೋದ ನಿಲ್ಲಿಸಿ ಇದೇ ರೀತಿ ಮುಂದುವರಿದರೆ ನಿಮ್ಮ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಡೂಮ್ ಮಾದರಿಯ ೩೫೦ ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ‌. ಅದರಲ್ಲಿ ೧೫೯ ಕಟ್ಟಡಗಳು ಸರ್ಕಾರಿ ಕಟ್ಟಡಗಳು. ೫೯ ಕಟ್ಟಡಗಳಲ್ಲಿ ಮೇಲೆ ಡೂಮ್ ಮಾದರಿ ಇದೆ. ಎಲ್ಲವನ್ನ ಒಡೆದು ಬಿಡ್ತಿರಾ..? ಸಾರ್ವಜನಿಕರಿಗೆ ಮನರಂಜನೆ ಕೊಡುವ ಕೆಲಸ ಮಾಡುತ್ತೀರಾ.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

 

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ೪೩ ಜನರಿಗೆ ಟಕೇಟ್ ಕೈ ತಪ್ಪುತ್ತದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿಟಿ ರವಿ, ಎಂಟಿಬಿ ನಾಗರಾಜು, ಮತ್ತು ನಮ್ಮ ಮೈಸೂರಿನ ರಾಮದಾಸ್ ಸೇರಿದಂತೆ ೪೩ ಜನರಿಗೆ ಟಿಕೇಟ್ ಸಿಗೋದಿಲ್ವಂತೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದರು.

ನನಗೆ ಅವರದೇ ಪಕ್ಷದ ಮುಖಂಡರೊಬ್ಬರೂ ಈ ಮಾಹಿತಿ ನೀಡಿದ್ದಾರೆ. ಹಾಗಾಗಿ ರಾಮದಾಸ್ ವಿರುದ್ಧ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಅದಕ್ಕೆ ನಿನ್ನೇ ಅವರೇ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ ಎಂದರು.

ಬಿಜೆಪಿಯವರು ದತ್ತಾಂಶ ಕದಿಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಈ ವ್ಯ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ದೇಶಾದ್ಯಂತ ೯ ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿಕೊಂಡಿದೆ. ಇದಕ್ಕೆ ಸುಮಾರು ೧೦ ಸಾವಿರ ಕೋಟಿ ಖರ್ಚು ಮಾಡಿದೆಯಂತೆ. ಈಗ ದತ್ತಾಂಶ ಕದಿಯುವ ಕೆಲಸ ಮಾಡಿ SC,ST,OBC  ಸೇರಿದಂತೆ ಅಲ್ಪಸಂಖ್ಯಾತರ ಮಾಹಿತಿ ಕಲೆಹಾಕಿ  ಕಾಂಗ್ರೆಸ್ ಗೆ ಮತಹಾಕದಂತೆ ತಡೆಯಲು ಷಂಡ್ಯಂತ್ರ ಮಾಡುತ್ತಿದ್ದಾರೆ. ಯಾರಿಗೂ ಮಾಹಿತಿ ಕೊಡಬೇಡಿ. ಇದೆಲ್ಲದಕ್ಕೂ ಸರ್ಕಾರವೇ ನೇರ ಹೊಣೆ ಎಂದು ಸರ್ಕಾರದ ನಡೆ ಖಂಡಿಸಿದರು.

ಮೈಸೂರು ವಿ.ವಿಯಲ್ಲಿ ಪದವಿ ಓದುವ ಮಕ್ಕಳ ಪುಸ್ತಕದಲ್ಲಿ ಸ್ವಮೂತ್ರ ಪಾನ ಮಾಡಿದರೆ ಏಡ್ಸ್ ಮತ್ತು ಕ್ಯಾನ್ಸರ್ ನಂತ ಮಹಾಮಾರಿ ರೋಗಗಳು ಗುಣವಾಗುತ್ತವೆ ಎಂದು ೫ ನೇ ಸೆಮಿಸ್ಟರ್ ನಲ್ಲಿ ಅಳವಡಿಸಿದ್ದಾರೆ. ಇದೆಲ್ಲಾ ಆರ್.ಎಸ್.ಎಸ್ ನ ಕೈವಾಡ. ಇದನ್ನ ನೋಡಿದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಗೊತ್ತಾಗುತ್ತದೆ. ಇದೆಂಥಾ ಅವೈಜ್ಞಾನಿಕತೆ ನೋಡಿ, ಇದೊಂದು ದೊಡ್ಡ ದುರಂತ. ಈ ಪಠ್ಯವನ್ನು ಕೂಡಲೆ ವಾಪಸ್ ಪಡೆಯಬೇಕು. ಎಪಿಸಿಸಿ ಒಂದು ವಾರ ಗಡುವು ಕೊಡುತ್ತದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುಣ್ಯ ಕೋಟಿ ಯೋಜನೆಯಡಿ ಪ್ರತಿಯೊಬ್ಬ ಸರ್ಕಾರಿ ನೌಕರನ ಹತ್ತಿರ ೧೧ ಸಾವಿರ ಗೋ ರಕ್ಷಣೆಗೆಂದು ಹಣ ಸಂಗ್ರಹ ಮಾಡಲು ಸರ್ಕಾರ ಹೊರಟಿದೆ. ರಾಜ್ಯದಲ್ಲಿ ೬.೫ ಲಕ್ಷ ಜನ ಸರ್ಕಾರಿ ನೌಕರರಿದ್ದಾರೆ ಹಾಗಾದರೆ ಒಟ್ಟು ಎಷ್ಟು ಕೋಟಿ ಆಯ್ತು. ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಯಾರೂ ೫ ಪೈಸೆನೂ ಕೊಡಬೇಡಿ. ಇದು ಅಕ್ಷಮ್ಯ ಅಪರಾಧ ರಾಜ್ಯಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷಣ್ ಕಿಡಿಕಾರಿದರು.

Key words: Bus shelter- controversy-KPCC spokesperson- M. Laxman – against- MP Pratap Simha