ಇಲಾಖೆ ಮೂಲಕವೇ ಅನಾಥ ಮಕ್ಕಳ ದತ್ತು ಪ್ರಕ್ರಿಯೆ: ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ

ಮೂರನೇ ಅಲೆಯ ಪ್ರಭಾವದಿಂದ ಮಕ್ಕಳನ್ನು ಕೋವಿಡ್‍ನಿಂದ ರಕ್ಷಿಸುವ ಕುರಿತಂತೆ ಸೂಚನೆ: -ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ
ಹಾವೇರಿ, ಜೂ.15: ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಮಕ್ಕಳು ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸೋಂಕಿಗೆ ತುತ್ತಾದಲ್ಲಿ ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ರಾಜ್ಯದಲ್ಲಿ ಮೊದಲ ಅಲೆಯಿಂದ ಈವರೆಗೆ 1735 ಹಾಗೂ ಹಾವೇರಿ ಜಿಲ್ಲೆಯಲ್ಲಿ 89 ಮಕ್ಕಳು ಕೋವಿಡ್ ಪಾಸಿಟಿವ್ ಸೋಂಕಿನಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಎಂದು ಹೇಳಿದರು.
ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಆರೋಗ್ಯ ಸಚಿವರ ಜೊತೆಗೂಡಿ ಚರ್ಚಿಸಲಾಗಿದೆ. ಮಕ್ಕಳಿಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ್ ವ್ಯವಸ್ಥೆ, ಐ.ಸಿ.ಯು ವ್ಯವಸ್ಥೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಇಲಾಖೆಯ ಪ್ರವಾಸ್ತವನೆಯನ್ನು ಒಪ್ಪಿದ ಕಾರಣ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಕುರಿತಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಪೌಷ್ಠಿಕ ಮಕ್ಕಳು: ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು ಕೋವಿಡ್‍ಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ 7751 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 4.47 ಲಕ್ಷ ಮಕ್ಕಳು ಅಪೌಷ್ಠಿಕತೆಯ ಅಂಚಿನಲ್ಲಿರುವ ಮಕ್ಕಳಿದ್ದಾರೆ. ಸಾಮಾನ್ಯ ಮಕ್ಕಳ ಜೊತೆಗೆ ಈ ಮಕ್ಕಳ ಮೇಲೆ ವಿಶೇಷ ನಿಗಾವಹಿಸಿ ಕೋವಿಡ್ ಸೋಂಕು ತಗಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಅನಾಥ ಮಕ್ಕಳಿಗೆ ನೆರವು: ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಹಾಗೂ ಏಕಪೋಷಕ ಮಕ್ಕಳಿಗೆ ಆರ್ಥಿಕ, ಶೈಕ್ಷಣಿಕ ನೆರವು ಒದಗಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮಕೈಗೊಂಡಿದೆ. ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆ ಹಾಗೂ ಬಾಲ ಹಿತೈಷಿ ಯೋಜನೆಯಡಿ ಪ್ರತಿ ತಿಂಗಳು ಮಕ್ಕಳಿಗೆ ಮೂರುವರೆಸಾವಿರ ರೂ. ಹಾಗೂ ಉಚಿತ ಶಿಕ್ಷಣ, ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಹಾಗೂ 21 ವರ್ಷ ಪೂರೈಸಿದ ಹೆಣ್ಣುಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಒಂದು ಲಕ್ಷ ರೂ. ನೆರವು ನೀಡಲಾಗುವುದು. ಅನಾಥ ಮಕ್ಕಳನ್ನು ಪಾಲಕರು ಪೋಷಿಸಲು ಅಸಮರ್ಥರಾಗಿದ್ದರೆ ದಾನಿಗಳ ನೆರವಿನಿಂದ ಇವರಿಗೆ ಶಿಕ್ಷಣ, ತರಬೇತಿ, ಉದ್ಯೋಗಾವಕಾಶಗಳನ್ನು ಕಲ್ಪುಸಲು ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕೋವಿಡ್‍ನಿಂದ ಪಾಲಕರು ಮೃತರಾಗಿ ಅನಾಥವಾಗಿರುವ 43 ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ದತ್ತು ಪ್ರಕ್ರಿಯೆ: ಕೋವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ಯಾರೂ ನೇರವಾಗಿ ದತ್ತು ಪಡೆಯಲು ಅವಕಾಶವಿರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ದತ್ತು ಪ್ರಕ್ರಿಯೆ ನಡೆಸಿ ಪಡೆಯಬೇಕು. ಕೋವಿಡ್‍ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳು ಇದ್ದಲ್ಲಿ ಇಲಾಖೆಯ ಸಹಾಯವಾಣಿ 1098ಕ್ಕೆ ಸಂಪರ್ಕಿಸಿ ಮಾಹಿತಿ ಕೊಡಬೇಕು. ಕೆಲವು ಸಾಮಾಜಿಕ ಜಾಲತಾಣದಲ್ಲಿ ಕೋವಿಡ್‍ನಿಂದ ಪಾಲಕರನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಸಾಕುವುದಾಗಿ ಸಂದೇಶಗಳು ಹರಿದಾಡುತ್ತಿವೆ. ಯಾರೂ ಸಹ ಈ ಸಂದೇಶಗಳನ್ನು ನಂಬದೇ ಸಂದೇಶದಲ್ಲಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮೋಸಹೋಗದಂತೆ ಸಾರ್ವಜನಿಕರು ಜಾಗೃತಿಯಿಂದ ಇರಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕಿನಿಂದ ಮೂರು ಜನ ಅಂಗನವಾಡಿ ಕಾರ್ಯಕರ್ತೆಯರು ಮರಣಹೊಂದಿದ್ದಾರೆ. ತಲಾ 30 ಲಕ್ಷ ರೂ. ಪರಿಹಾರ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಬಾರಿ ಕೋವಿಡ್‍ಗೆ ಬಲಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಪರಿಹಾರ ಪಾವತಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ ಉತ್ತಮ ಕ್ರಮ: ಕೋವಿಡ್ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾಡಳಿತ ಉತ್ತಮ ಸಿದ್ಧತೆ ಮಾಡಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಮೂರನೇ ಅಲೆ ಕುರಿತಂತೆ ವ್ಯಾಪಕವಾದ ಪ್ರಚಾರದ ಜೊತೆಗೆ ಸಿದ್ಧತೆಗಳನ್ನು ಎಚ್ಚರದಿಂದ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯ ಏಳು ತಾಲೂಕಾ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ವಾರ್ಡ್‍ಗಳನ್ನು ಮಾಡಲಾಗಿದೆ. 119 ಬೆಡ್‍ಗಳನ್ನು ಕಾಯ್ದಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ 195 ಬೆಡ್‍ಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಮೊದಲನೇ ಅಲೆಯಿಂದ ಈವರೆಗೆ 991 ಮಕ್ಕಳಿಗೆ ಸೋಂಕು ತಗಲಿದ್ದು, 901 ಸೋಂಕಿನಿಂದ ಗುಣಮುಖರಾಗಿದ್ದಾರೆ. 89 ಮಕ್ಕಳ ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಒಂದು ಮಗುವಿಗೆ ಕೋವಿಡ್ ಸೋಂಕು ತಗುಲಿ ಮರಣಹೊಂದಿದೆ. ಕೋವಿಡ್ ಸೋಂಕಿನಿಂದ ಅಲ್ಲ ಎಂದು ಹೇಳಿದರು.