7ನೇ ಅಂತಾರಾಷ್ಟ್ರೀಯ ದಿನದಂದು 1 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಂದ ಯೋಗ

ಡಿಸಿಎಂ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಈ ವರ್ಷ ಸರಕಾರಿ ಕಾರ್ಯಕ್ರಮದಲ್ಲಿ 100 ಜನಕ್ಕೆ ಮಾತ್ರ ಅವಕಾಶ
ಬೆಂಗಳೂರು: ಇದೇ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಚುಯಲ್‌ ವೇದಿಕೆ ಮೂಲಕ ಯೋಗಾಭ್ಯಾಸ ನಡೆಸಲಿದ್ದಾರೆಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಕೋವಿಡ್‌ ಕಾರಣದಿಂದ ಈ ವರ್ಷದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜ್ಯದಲ್ಲಿ ಅತ್ಯಂತ ಸರಳವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಕೇವಲ 100 ಜನರು ಮಾತ್ರ ಭಾಗಿಯಾಗಲಿದ್ದಾರೆ. ಅಂದು ಬೆಳಗ್ಗೆ 7ರಿಂದ 8 ಗಂಟೆವರೆಗೆ ಕಾರ್ಯಕ್ರಮ ನಡೆಯುತ್ತದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಈ ವರ್ಷದ ಯೋಗ ದಿನಾಚರಣೆ ಕ್ರೀಡಾ ಮತ್ತು ಯುವಜನ ಸಬಲೀಕರಣ, ನಿಮ್ಹಾನ್ಸ್‌, ಪರಿವರ್ತನಾ ಯೋಗಾ ಪ್ರತಿಷ್ಠಾನ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ ನಡೆಯಲಿದೆ. ಸೋಂಕಿನ ಕಾಯಿಲೆ ಇರುವ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ʼಕೋವಿಡ್-‌19, ಯುವಜನರು, ಯೋಗ, ಧ್ಯಾನʼ ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಚಿವ ನಾರಾಯಣಗೌಡ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಶಾಸಕ ಗೋವಿಂದರಾಜು, ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸಭೆಯಲ್ಲಿ ಹಾಜರಿದ್ದರು.