ರಸಗೊಬ್ಬರ ಕೊರತೆ ನೀಗಿಸಲು ಕ್ರಮಕೈಗೊಳ್ಳಿ: ನಾಪತ್ತೆಯಾಗಿರುವ ಕೃಷಿ ಸಚಿವರನ್ನ ಹುಡುಕಿ ಕೆಲಸಕ್ಕೆ ಹಚ್ಚಿ-ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಅಕ್ಟೋಬರ್,26,2021(www.justkannada.in): ಹಿಂಗಾರು ಮತ್ತು‌ ನೀರಾವರಿ ಬೆಳೆಗಳಿಗೆ ರಸಗೊಬ್ಬರದ ತುರ್ತು ಅಗತ್ಯ ಇದೆ. ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ಮೈಮರೆಯದೆ ತಕ್ಷಣ ರಸಗೊಬ್ಬರ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು. ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ರೈತರು ಎದುರಿಸುತ್ತಿರುವ ರಸಗೊಬ್ಬರ ಅಭಾವದ ಸಮಸ್ಯೆ  ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ರಸಗೊಬ್ಬರ ಕೇಳಿದವರಿಗೆ ಗುಂಡು ಹೊಡೆದು ಇಬ್ಬರು ರೈತರನ್ನು ಸಾಯಿಸಿದ್ದರು. ಈಗಿನ ಸರ್ಕಾರದ ನಿರ್ಲಕ್ಷ ನೋಡಿದರೆ ಬಸವರಾಜ ಬೊಮ್ಮಾಯಿ ಅವರಿಗೂ ಅದೇ ದುರುದ್ದೇಶ ಇದ್ದಂತಿದೆ.ರಾಜ್ಯದಲ್ಲಿ ಡಿಎಪಿ ಮತ್ತು ಎಂಒಪಿ ರಸಗೊಬ್ಬರ ದಾಸ್ತಾನು 65%ರಿಂದ 75% ರಷ್ಟು ಕಡಿಮೆ ಇದೆ. ಲಭ್ಯವಿರುವ ಅಲ್ಪಪ್ರಮಾಣದ ರಸಗೊಬ್ಬರ ಕೂಡಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ‌ ಮೈಮರೆತಿದ್ದು ರೈತರ ಗೋಳನ್ನು ಕೇಳುವವರು ಇಲ್ಲದಂತಾಗಿದೆ. ಕಚ್ಚಾ ವಸ್ತುಗಳ ಬೆಲೆ ಮತ್ತು ಕಸ್ಟಮ್ಸ್ ಸುಂಕ ಹೆಚ್ಚಳ ರಸಗೊಬ್ಬರ ಕೊರತೆಗೆ ಕಾರಣ ಎನ್ನಲಾಗಿದೆ. ಮೂರು ತಿಂಗಳ ಹಿಂದೆಯೇ ಪರಿಸ್ಥಿತಿಯ ಅರಿವಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕೂತಿದ್ದರ ಫಲವನ್ನು ರೈತರು ಅನುಭವಿಸಬೇಕಾಗಿದೆ ಎಂದು ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರದಲ್ಲಿ ಮೈಮರೆಯದೆ ತಕ್ಷಣ ರಸಗೊಬ್ಬರ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Key words: Take action – reduce – fertilizer –shortage- Former CM- Siddaramaiah