ಬೆಂಗಳೂರು, ಅಕ್ಟೋಬರ್, 29,2026 (www.justkannada.in): 2011ರ ಸಾಲಿನ 362 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಲು 2022ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಈ ಮಹತ್ದದ ತೀರ್ಪು ನೀಡಿದೆ, ಈಗಾಗಲೇ ಅಕ್ರಮಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ರದ್ದುಗೊಳಿಸಿದ್ದ 362 ಹುದ್ದೆಗಳ ಆಯ್ಕೆ ಪಟ್ಟಿಗೆ ಜೀವ ತುಂಬಲು ರಾಜ್ಯ ಸರ್ಕಾರವು ವಿಧಾನಮಂಡಲದಲ್ಲಿ ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ) ವಿಧೇಯಕ- 2022’ ಅನ್ನು ತಂದು ಶಾಸನ ರೂಪಿಸಿತ್ತು.
ನ್ಯಾಯಾಲಯದ ರದ್ದತಿಯನ್ನು ಮೀರಿ ಕಾಯ್ದೆ ರೂಪಿಸಿ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಲು ಹೊರಟ ಸರ್ಕಾರದ ಈ ಕ್ರಮ ಶಾಸನಬದ್ಧವಲ್ಲ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
2011ರ ಬ್ಯಾಚ್‌ನ ಈ ಅಧಿಕಾರಿಗಳು ಈಗಾಗಲೇ ಹಲವು ಪ್ರಮುಖ ಇಲಾಖೆಗಳಲ್ಲಿ ತಹಸೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ವಾಣಿಜ್ಯ ತೆರಿಗೆ ಅಧಿಕಾರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈ ಅಧಿಕಾರಿಗಳು ಸೇವೆಯಿಂದ ವಜಾಗೊಳ್ಳುವ ಭೀತಿಗೆ ಸಿಲುಕಿದ್ದಾರೆ. ಪ್ರಸ್ತುತ ಸೇವೆಯಲ್ಲಿರುವ ಹಾಗೂ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದ 362 ಕೆಎಎಸ್ ಅಧಿಕಾರಿಗಳ ಭವಿಷ್ಯ ಮತ್ತೆ ಭಾರಿ ಅತಂತ್ರಕ್ಕೆ ತೀರ್ಪು ಕಾರಣವಾಗಿದೆ.







