ಪಿಯು ಕಾಲೇಜುಗಳಲ್ಲಿ ಶೌಚಾಲಯ ಬಳಕೆಗೆ ವಿದ್ಯಾರ್ಥಿಗಳಿಂದ ಪೀಕಲಾಗುತ್ತಿದೆ ರೂ.24

ಬೆಂಗಳೂರು, ಮೇ 19, 2022 (www.justkannada.in): ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸುತ್ತಿರುವ ಶುಲ್ಕದಲ್ಲಿ ಯಾವ ಯಾವ ಶುಲ್ಕಗಳು ಸೇರಿವೆ ಎನ್ನುವ ಬ್ರೇಕ್‌ ಅಪ್ ವಿವರಗಳಿಂದ ಶೌಚಾಲಯ ಬಳಕೆಗೂ ಪ್ರತಿ ವಿದ್ಯಾರ್ಥಿಯಿಂದ ಶೌಚಾಲಯ ಶುಲ್ಕ ಕೀಳುತ್ತಿರುವ ವಿಷಯ ಬಹಿರಂಗಗೊಂಡಿದೆ.

ಪಿಯು ಇಲಾಖೆ, ಪ್ರತಿ ವಿದ್ಯಾರ್ಥಿಯಿಂದ ಸಂಗ್ರಹಿಸಬೇಕಿರುವ ಶುಲ್ಕದ ಬ್ರೇಕ್‌ ಅಪ್ ವಿವರಗಳನ್ನು ಬಿಡುಗಡೆಗೊಳಿಸಿದೆ. ಒಟ್ಟು ಶುಲ್ಕವನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ವಿದ್ಯಾರ್ಥಿಯಿಂದ ರೂ.24 ಅನ್ನು ವಾರ್ಷಿಕ ಶೌಚಾಲಯ ಶುಲ್ಕವಾಗಿ ಸಂಗ್ರಹಿಸಲಾಗುತ್ತಿದೆ. ಶುಲ್ಕದ ಉಳಿದ ವರ್ಗಗಳ ಪೈಕಿ ರೂ.೨೪ ವಿದ್ಯುತ್ ಶುಲ್ಕ, ರೂ.೧೨೦ ಗ್ರಂಥಾಲಯ ಶುಲ್ಕ, ರೂ.೩೫ ಪ್ರವೇಶಾತಿ ಶುಲ್ಕ, ರೂ.೨೪ ಕ್ರೀಡಾ ಶುಲ್ಕ ಹಾಗೂ ರೂ.೬೭೦ ಬೋಧನಾ ಶುಲ್ಕವನ್ನಾಗಿ ಸಂಗ್ರಹಿಸಲಾಗುತ್ತಿದೆ.

ಈ ಸಂಬಂಧ ಮಾತನಾಡಿದ 10ನೇ ತರಗತಿ ವಿದ್ಯಾರ್ಥಿಯೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವಂತೆ, “ಕಾಲೇಜುಗಳಲ್ಲಿ ಶೌಚಾಲಯಗಳು ಸ್ವಚ್ಛವಾಗಿದ್ದರೆ ನಮಗೆ ಶೌಚಾಲಯ ಶುಲ್ಕವನ್ನು ಭರಿಸುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಬಹುತೇಕ ಕಾಲೇಜುಗಳಲ್ಲಿ ಶೌಚಾಲಯಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿವೆ. ಇದರಿಂದಾಗಿ ವಿದ್ಯಾರ್ಥಿಗಳು ಶೌಚಾಲಯವನ್ನು ಬಳಸಲು ಇಷ್ಟಪಡುವುದಿಲ್ಲ. ಹುಡುಗಿಯರಿಗಂತೂ ಇನ್ನೂ ಕಷ್ಟ,” ಎಂದರು.

‘ಫಲಿತಾಂಶವಿಲ್ಲದೆ ಐಜಿಸಿಎಸ್‌ ಇ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಇಲ್ಲ.

ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ಗುರುವಾರದಂದು ಘೋಷಿಸುವುದಾಗಿ ತಿಳಿಸಲಾಗಿದೆ. ಇದರೊಂದಿಗೆ ಪಿಯು ಕಾಲೇಜುಗಳು ಮೊದಲನೇ ಪಿಯು ತರಗತಿಗೆ ಪ್ರವೇಶಾತಿ ಅರ್ಜಿಗಳನ್ನು ಹಂಚುವ ಪ್ರಕ್ರಿಯೆಯನ್ನು ಶುಕ್ರವಾರದಿಂದ ಆರಂಭಿಸುತ್ತವೆ. ತರಗತಿಗಳು ಜೂನ್ 9 ರಿಂದ ಆರಂಭವಾಗಲಿದೆ.

ಆದರೆ, ಐಜಿಸಿಎಸ್‌ಇ/ ಕೇಂಬ್ರಿಡ್ಜ್ ಇಂಟರ್‌ ನ್ಯಾಷನಲ್ ಪಠ್ಯಕ್ರಮವಿರುವ ವಿದ್ಯಾರ್ಥಿಗಳಿಗೆ ಫಲಿತಾಂಶಗಳು ಇನ್ನೂ ಘೋಷಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಪಿಯು ಇಲಾಖೆಯು ಫಲಿತಾಂಶವಿಲ್ಲದೆ ಐಜಿಸಿಎಸ್‌ಇ/ ಕೇಂಬ್ರಿಡ್ಜ್ ಪಠ್ಯಕ್ರಮವಿರುವ ವಿದ್ಯರ್ಥಿಗಳಿಗೆ ಪ್ರವೇಶಾತಿ ನೀಡದಿರುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

“ಈವರೆಗೂ ಐಜಿಸಿಎಸ್‌ ಇ ಬೋರ್ಡ್ ನಿಂದ ೧೦ನೇ ತರಗತಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಫಲಿತಾಂಶ ಘೋಷಣೆ ಆಗುವುದಕ್ಕೆ ಮುಂಚೆಯೇ ಮೊದಲ ಪಿಯು ತರಗತಿಗೆ ಪ್ರವೇಶಾತಿ ಕಲ್ಪಿಸಲಾಗುತಿತ್ತು. ಆದರೆ ಈಗ ಕಾಲೇಜುಗಳಿಗೆ ಐಜಿಸಿಎಸ್‌ ಇ ವಿದ್ಯಾರ್ಥಿ ಅಧಿಕೃತ ಅಂಕಪಟ್ಟಿಯನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಸೂಚಿಸಲಾಗಿದೆ. ಈ ಸೂಚನೆಯಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸಂಬಂಧಪಟ್ಟ ಬೋರ್ಡ್ ಗಳಿಂದ ೧೧ನೇ ತರಗತಿಯನ್ನು ಮುಗಿಸಿರುವ ಐಜಿಸಿಎಸ್‌ಇ/ ಎನ್‌ಡಬ್ಲ್ಯು ಎಎಸ್ ವಿದ್ಯಾರ್ಥಿಗಳಿಗೂ ಸಹ ೧೨ನೇ ತರಗತಿಗೆ ಪ್ರವೇಶಾತಿಯನ್ನು ನಿರ್ಬಂಧಿಸಲಾಗಿದೆ,” ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ, ಸಿಇಟಿ ಅಥವಾ ಜೆಇಇ ತರಬೇತಿಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳೊಂದಿಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳದಿರುವಂತೆಯೂ ಪಿಯು ಇಲಾಖೆ ಕಾಲೇಜುಗಳಿಗೆ ಸೂಚನೆ ನೀಡಿದೆ.

೭೫% ಹಾಜರಾತಿ ಕಡ್ಡಾಯ

ಕ್ರಮೇಣ ಕಾಲೇಜುಗಳು ಆಫ್‌ ಲೈನ್ ತರಗತಿಗಳಿಗೆ ಮರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ ಶೇ.೭೫ ಹಾಜರಾತಿಯನ್ನು ಕಡ್ಡಾಯಪಡಿಸಲಾಗಿದೆ. ಕೇವಲ ಶೇ.೭೫ ಹಾಜರಾತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಮೊದಲನೇ ಪಿಯು ಪರೀಕ್ಷೆಯನ್ನು ತೆಗೆದುಕೊಳ್ಳುವ ಅರ್ಹರಾಗಿರುತ್ತಾರೆ.

ಸೆಪ್ಟೆಂಬರ್ ೧೬, ಡಿಸೆಂಬರ್ ೧೫, ಹಾಗೂ ಜನವರಿ ೨೭ರಂದು ಪೋಷಕರು-ಶಿಕ್ಷಕರ ಸಭೆಗಳನ್ನು ನಡೆಸುವಂತೆಯೂ ತಿಳಿಸಲಾಗಿದೆ. ಆದಾಗ್ಯೂ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಹಾಜರಾತಿಯನ್ನು ಅವರು ಕಾಲೇಜಿಗೆ ಸೇರಿದ ದಿನಾಂಕದಿಂದ ಲೆಕ್ಕ ಮಾಡಲಾಗುತ್ತದೆ.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Student- toilet -use – PU colleges -charges