ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಆಗ್ರಹ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ, ಆಕ್ರೋಶ.

ಮಂಡ್ಯ,ಆಗಸ್ಟ್,17,2023(www.justkannada.in):  ಕೆಆರ್ ಎಸ್ ಡ್ಯಾಂ ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ ನೀರು ಹರಿಸುವ ಮೂಲಕ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಸಿಡಿದೆದ್ದಿದ್ದು, ಕೂಡಲೇ ಹೆಚ್ಚವರಿ ನೀರು ಬಿಡುತ್ತಿರುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ನೀರು ನಿಲುಗಡೆಗೆ ಆಗ್ರಹಿಸಿ ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಶ್ರೀರಂಗಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಧರಣಿ ನಡೆಸಿದ್ದಾರೆ. ರೈತ ಮುಖಂಡ ನಂಜೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಲು ಆಗ್ರಹಿಸಿ ಮಂಡ್ಯದ ಡಿಸಿ ಕಚೇರಿ ಬಳಿಯೂ ರೈತಸಂಘ ಪ್ರತಿಭಟನೆ  ನಡೆಸಿದ್ದು ಕೇಂದ್ರ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಆದರೂ ಸಹ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ದ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

Key words: stop -Cauvery –water- released – Tamil Nadu- Protest- against – government.