“ರಾಜ್ಯದಲ್ಲಿ ಲಸಿಕೆ‌ ಸಂಗ್ರಹಕ್ಕೆ ಸಿದ್ಧತೆ ಪೂರ್ಣ” : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಜನವರಿ 10, 2021(www.justkannada.in) :  ರಾಜ್ಯದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ವಿತರಣೆಗೂ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ  ಡೋಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk-logo-justkannada-mysore

ಲಸಿಕೆ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಜೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಈಗಾಗಲೇ ಪ್ರಧಾನಿಗಳು ಜನವರಿ 16 ರಿಂದ ಕೊರೊನಾ ಲಸಿಕೆ ನೀಡುವ ಬಗ್ಗೆ ತಿಳಿಸಿದ್ದಾರೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ 3 ಕೋಟಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 2 ಲಸಿಕೆ ಸಂಗ್ರಹ ವ್ಯವಸ್ಥೆಗಳಿವೆ. ಇದಲ್ಲದೆ, ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ 5 ಪ್ರಾದೇಶಿಕ ಸಂಗ್ರಹ ವ್ಯವಸ್ಥೆ ಇದೆ. ಪ್ರತಿ ಜಿಲ್ಲೆಯಲ್ಲೂ ಒಂದು ಕಾರ್ಪೊರೇಷನ್ ಲಸಿಕೆ ಸಂಗ್ರಹ ವ್ಯವಸ್ಥೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಬ್ಲಾಕ್ ಇದೆ. ಒಟ್ಟು 2,767 ಕೋಲ್ಡ್ ಚೇನ್ ಪಾಯಿಂಟ್ ಗಳು ಇವೆ. ಇವೆಲ್ಲ ಮೂಲಸೌಕರ್ಯದೊಂದಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 900 ಲಸಿಕೆ ಕ್ಯಾರಿಯರ್ ಗಳಿವೆ. ಲಸಿಕೆಯನ್ನು ಮೊದಲಿಗೆ ಪ್ರಾದೇಶಿಕ ಸಂಗ್ರಹ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಎರಡು ವಾಕ್ – ಇನ್  ಕೂಲರ್ ಇದೆ. ಒಂದರಲ್ಲಿ 45 ಲಕ್ಷ ಡೋಸ್ ಸಂಗ್ರಹಿಸಲು ಅವಕಾಶವಿದೆ. ಇದೇ ರೀತಿ ಒಂದು ವಾಕ್- ಇನ್ ಫ್ರೀಜರ್ ಇದೆ. ಅದರಲ್ಲಿ 40 ಲಕ್ಷ ಡೋಸ್ ಸಂಗ್ರಹ ಸಾಮರ್ಥ್ಯವಿದೆ. ಕೇಂದ್ರ ಸರ್ಕಾರ ಇನ್ನೂ ಒಂದು ವಾಕ್- ಇನ್ ಫ್ರೀಜರ್ ನೀಡಲಿದೆ ಎಂದರು.state,Vaccine,collection,Preparation,Full,Minister Dr.K.Sudhakar

ರಾಜ್ಯದಲ್ಲಿ ಎಲ್ಲ ಬಗೆಯ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 13.90 ಲಕ್ಷ ಕೊರೊನಾ ಲಸಿಕೆ ಬರಲಿದೆ. 24 ಲಕ್ಷ ಸಿರಿಂಜ್ ಗಳು ಕೇಂದ್ರದಿಂದ ಈಗಾಗಲೇ ಬಂದಿವೆ. ರಾಜ್ಯಕ್ಕೆ ಒಟ್ಟು  24 ಲಕ್ಷ ಡೋಸ್ ಬರಲಿದೆ ಎಂದು ವಿವರಿಸಿದರು.

ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಿಗೆ ಲಸಿಕೆ ನೀಡಲು ಎರಡು ತಿಂಗಳು ಬೇಕಾಗಬಹುದು. ಪ್ರತಿಯೊಬ್ಬರಿಗೂ ಲಸಿಕೆ ಬೇಕೆ ಬೇಡವೇ ಎಂಬುದನ್ನು ತಜ್ಞರ ಸಲಹೆ ಮೇರೆಗೆ ಸರ್ಕಾರ ತೀರ್ಮಾನಿಸಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡುವುದಾದರೂ ಮೊದಲಿಗೆ ವೃದ್ಧರು, ಅಶಕ್ತರಿಗೆ ನೀಡಲಾಗುವುದು ಎಂದು ಹೇಳಿದರು.

state,Vaccine,collection,Preparation,Full,Minister Dr.K.Sudhakar

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮಾಹಿತಿಯನ್ನು ಸಮರ್ಪಕವಾಗಿ ಕಲೆಹಾಕಿ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತಿದೆ.  ಯು.ಕೆ‌.ಯಿಂದ ಬಂದ ವಿಮಾನದಲ್ಲಿ ಒಟ್ಟು 289 ಮಂದಿ ಇದ್ದರು. ಎಲ್ಲರ ಮಾದರಿ ಪಡೆದು ಪರೀಕ್ಷೆ ಮಾಡಿದ್ದು, ನಾಲ್ಕು ಮಂದಿಯ ಒಂದು ಪೂಲ್ ನಲ್ಲಿ ಕೊರೊನಾ ಸೋಂಕು ಬಂದಿದೆ. ಯಾರು ರೋಗಿ ಎಂದು ನಿಖರವಾಗಿ ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಯಾರು ಬೇಕಾದರೂ ರಾಜಕೀಯ ಮುಖಂಡರೊಂದಿಗೆ ಫೋಟೋ ತೆಗೆದುಕೊಳ್ಳುತ್ತಾರೆ. ಯಾರೋ ಅಪರಾಧಿ ರಾಜಕಾರಣಿಗಳೊಂದಿಗೆ ಫೋಟೊ ತೆಗೆಸಿಕೊಂಡರೆ ಅದನ್ನೇ ರಾಜಕಾರಣಿಗಳ ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ತಿಳಿಸಿದರು.

key words : state-Vaccine-collection-Preparation-Full-Minister Dr.K. Sudhakar