ರೈತರಿಗೆ ಹೆಚ್ಚು ಮಾರುಕಟ್ಟೆ ಒದಗಿಸಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತ- ಸಚಿವ ಎಸ್ ಟಿ ಸೋಮಶೇಖರ್

ಕೋಲಾರ,ಆಗಸ್ಟ್,19,2020(www.justkannada.in):  ರೈತರಿಗೆ ಹೆಚ್ಚು ಮಾರುಕಟ್ಟೆ ಒದಗಿಸುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಬೆಂಗಳೂರು ಸಹಿತ ರಾಜ್ಯದ ಹಲವೆಡೆ ಸರ್ಕಾರಿ ಜಾಗವನ್ನು ಬಳಸಿಕೊಂಡು ಎಪಿಎಂಸಿ ನಿರ್ಮಾಣ ಮಾಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಮೂಲಕ ರೈತರಿಗೆ ಅನುಕೂಲವಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.jk-logo-justkannada-logo

ಇಲ್ಲಿನ ಜೆಎಸ್ ಎಸ್ ಹೈಸ್ಕೂಲ್ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, 21 ಡಿಸಿಸಿ ಬ್ಯಾಂಕ್ ಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದ್ದು, ಇಲ್ಲಿ ಎಸ್ ಸಿ ಎಸ್ ಟಿ, ರೈತರಿಗೆ ಬೆಳೆ ಸಾಲ, ಬಡವರಬಂಧು, ಕಾಯಕ ಯೋಜನಗಳಡಿ ನೀಡಲಾಗುತ್ತಿರುವ ಸಾಲಗಳ ಬಗ್ಗೆ ಮಾಹಿತಿ, ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಬಗೆಹರಿಸುವುದಾಗಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 14500 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 1022518 ರೈತರಿಗೆ 6824.94 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಬಾಕಿ ಸಾಲಮನ್ನಾ ಶೀಘ್ರ ಇತ್ಯರ್ಥ….

ಕಳೆದ ಬಾರಿ ಸಾಲಮನ್ನಾದಲ್ಲಿ ಬಾಕಿ ಉಳಿದಿದ್ದವರು ಸಮರ್ಪಕ ದಾಖಲೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿತ್ತು. ಅವರಲ್ಲಿ ಈಗ ಸಮರ್ಪಕವಾಗಿ ದಾಖಲೆ ಸಲ್ಲಿಸಿದ 7 ಸಾವಿರ ರೈತರ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇನ್ನು 23 ಸಾವಿರ ರೈತರ ಸಾಲಮನ್ನಾ ಬಾಕಿ ಇರುವುದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿ ಅದನ್ನೂ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ರೈತರಿಗಾಗಿ ಸೆಸ್ ಇಳಿಸಿದ ಮುಖ್ಯಮಂತ್ರಿಗಳು….

ಎಪಿಎಂಸಿ ಸೆಸ್ ಶೇ. 1.5 ರಿಂದ ಶೇ. 1 ಕ್ಕೆ ಇಳಿಸಲಾಗಿತ್ತು. ಆದರೆ ನೂತನ ಕಾಯ್ದೆಯನ್ವಯ ಇದೂ ಹೆಚ್ಚಾಗಲಿದೆ ಎಂಬ ಕೂಗು ಬಂದ ಹಿನ್ನೆಲೆಯಲ್ಲಿ ಇದನ್ನು 35 ಪೈಸೆಗೆ ಮುಖ್ಯಮಂತ್ರಿಗಳು ಇಳಿಸಿ ಆದೇಶ ಹೊರಡಿಸಿದ್ದಾರೆ. ಈ 35 ಪೈಸೆಗಳ ಆದಾಯದಿಂದಲೇ ಎಪಿಎಂಸಿ ನೌಕರರಿಗೆ ವೇತನ ಸಹಿತ, ನಿರ್ವಹಣಾ ವೆಚ್ಚಗಳನ್ನು ನೋಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಎಪಿಎಂಸಿ ಸ್ಥಳಕ್ಕಾಗಿ 100 ಎಕರೆ ಜಾಗ ನೀಡಲು ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಆ ಜಾಗದ ಬಗ್ಗೆ ಮಾಹಿತಿಯನ್ನು ಪರಿಶೀಲನೆ ಶೀಘ್ರದಲ್ಲಿ ಮಂಜೂರು ಆದೇಶವನ್ನು ನೀಡಿ ಜಾಗವನ್ನು ಹಸ್ತಾಂತರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಎಪಿಎಂಸಿ ಅಧಿಕಾರ ಮೊಟಕುಗೊಳಿಸಲಾಗಿಲ್ಲ. ಇಲ್ಲಿ ರೈತರಿಗೆ ಯಾವುದೇ ಅನಾನುಕೂಲವಾಗುವುದಿಲ್ಲ. ರೈತರ ಬೆಳೆ ರೈತರ ಹಕ್ಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಯ್ದೆಗೆ ತಿದ್ದುಪಡಿ ತಂದು ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಇಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ. ಅಂತಹ ಸಂದರ್ಭಗಳು ಎದುರಾದರೆ ರಾಜ್ಯ ಎಪಿಎಂಸಿ ವತಿಯಿಂದ ಅಕ್ರಮದಲ್ಲಿ ತೊಡಗಿದವರ ಪರವಾನಗಿ ರದ್ದು ಮಾಡುವ ಅಧಿಕಾರ ಇದೆ ಎಂದೂ ಸಚಿವರು ಸ್ಪಷ್ಟಪಡಿಸಿದರು.

ಹಾಲು ಒಕ್ಕೂಟಗಳ ಸ್ವತಂತ್ರ ಬಗ್ಗೆ ಶೀಘ್ರ ಕ್ರಮ

ಕೋಚಿಮುಲ್, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಹಾಲು ಒಕ್ಕೂಟಗಳನ್ನು ಪ್ರತ್ಯೇಕಗೊಳಿಸಿ ಸ್ವತಂತ್ರ ಆಡಳಿತ ನೀಡುವ ನಿಟ್ಟಿನಲ್ಲಿ ಈಗಾಗಲೇ 2-3 ಸಭೆಗಳು ನಡೆದಿವೆ. ನಬಾರ್ಡ್ ಗೆ ಸಹ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯ ಲಾಭಾಂಶದಲ್ಲಿರುವ ಸಹಕಾರ ಸಂಘಗಳಿಗೆ ಮನವಿ ಮಾಡಿ ಅವರಿಂದ ಹಣ ಸಂಗ್ರಹಿಸಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದರಿಂದ 42537  ಆಶಾ ಕಾರ್ಯಕರ್ತೆಯರಲ್ಲಿ 813 ಮಂದಿಗಷ್ಟೇ ವಿತರಣೆ ಬಾಕಿ ಇದೆ.

ಗುಲ್ಬರ್ಗದಲ್ಲಿ ತಲಾ 1 ಸಾವಿರ ರೂಪಾಯಿಯನ್ನು ವಿತರಣೆ ಮಾಡಲಾಗಿತ್ತು. ಬಾಕಿ 2 ಸಾವಿರ ರೂಪಾಯಿಯನ್ನು ಕೊಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುವುದು. ಮೈಸೂರು ಜಿಲ್ಲೆಯ ಹುಣಸೂರಿನಲ್ಲೂ ಅಲ್ಪ ಮೊತ್ತದ ಬಾಕಿ ಇದ್ದು, ಅದನ್ನೂ ಆದಷ್ಟು ಬೇಗ ವಿತರಣೆ ಮಾಡಲಾಗುವುದು. ಈ ಮೂಲಕ ನಮ್ಮ ಸಹಕಾರ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳು ನೀಡಿದ ಜವಾಬ್ದಾರಿಯನಚನು ನೂರಕ್ಕೆ ನೂರರಷ್ಟಯ ಸಮರ್ಪಕವಾಗಿ ಹಾಗೂ ವೇಗವಾಗಿ ಮಾಡಿ ಕೊಟ್ಟಂತಾಗಲಿದೆ ಎಂದು ಸಚಿವರು ತಿಳಿಸಿದರು.

ವೈದ್ಯರು, ನರ್ಸ್ ಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡಬೇಕೆಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಈ ಬಗ್ಗೆ ಸಚಿವ ಸಂಪುಟ ಸದಸ್ಯರೂ ಒಪ್ಪಿಗೆ ಸೂಚಿಸಿದ್ದಾರೆ.  ಮುಖ್ಯಮಂತ್ರಿಗಳು ಸಹ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು, ತೀರ್ಮಾನವನ್ನು ಕೈಗೊಂಡು ಶೀಘ್ರದಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸಚಿವರಿಂದ ಕೊರೋನಾ ಟಿಪ್ಸ್

ನಾನು 25-26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನನಗೂ ಕೊರೋನಾ ಬಂತು. ಆದರೆ, ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ. ಈ ಸೋಂಕಿಗೆ ಭಯ ಬೇಡ, ಎರಡು ಮಾತ್ರೆಗಳನ್ನು ಕೊಡುತ್ತಾರೆ. ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ಸಾಕು. ಅಸ್ತಮಾದಂತಹ ರೋಗಿಗಳು ಮಾತ್ರ ಬಹಳ ಜಾಗ್ರತೆವಹಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಚಿವರಾದ ಸೋಮಶೇಖರ್ ಅವರು ಸಲಹೆ ನೀಡಿದರು.

ಸಚಿವರಾದ ಎಚ್.ನಾಗೇಶ್ ಮಾತನಾಡಿ, ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಕೊರೋನಾ ವಾರಿಯರ್ಸ್ ಗಳ ಸೇವೆ ನಿಜಕ್ಕೂ ಅಭಿನಂದನಾರ್ಹ. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಮಾಡುತ್ತಿರುವ ಕಾರ್ಯಕ್ರಮ ಉತ್ತಮವಾಗಿದೆ. ಇನ್ನು ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬದವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ತಿಳಿಸಿದರು.

ಸಂಸದರಾದ ಮುನಿಸ್ವಾಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಜೊತೆಗೆ ಜನಪ್ರತಿನಿಧಿಗಳೂ ಸಹ ಕೈಜೋಡಿಸಿದರೆ ಕೊರೋನಾ ಮುಕ್ತ ನಾಡು ಮಾಡಬಹುದು. ಸಹಕಾರ ಸಚಿವರಾದ ಸೋಮಶೇಖರ್ ಅವರು ಈಗಾಗಲೇ 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಆಶಾ ಕಾರ್ಯಕರ್ತೆಯರಿಗೆ ಖುದ್ದು ಪ್ರೋತ್ಸಾಹಧನ ವಿತರಣೆ ಮಾಡುವ ಮೂಲಕ ನೈತಿಕ ಬಲ ತುಂಬಿದ್ದಾರೆ ಎಂದು ಹೇಳಿದರು.

ಕೋಲಾರ ಜಿಲ್ಲೆಗೆ ರೈತರ ಎಪಿಎಂಸಿಗೆ ಜಾಗ ಬೇಕೆಂಬ ಬಹುವರ್ಷಗಳ ಬೇಡಿಕೆ ಬಗ್ಗೆ ಸಚಿವರಾದ ಸೋಮಶೇಖರ್ ಅವರ ಗಮನಕ್ಕೆ ತಂದಾಗ, ಮೊದಲೇ ಪ್ರಸ್ತಾವನೆ ಸಲ್ಲಿಸಿದ್ದರೆ ಈ ಕಾರ್ಯಕ್ರಮಕ್ಕೆ ಬರುವ ವೇಳೆಗೆ ಮಂಜೂರು ಮಾಡಿಸುತ್ತಿದ್ದೆ ಎಂದು ಹೇಳಿದರು. ಇದು ಅವರ ಅಭಿವೃದ್ಧಿಪರ ಚಿಂತನೆಯನ್ನು ತೋರಿಸುತ್ತದೆ. ಹೀಗಾಗಿ ಅವರಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಶಾಸಕರಾದ ಕೆ.ವೈ.ನಂಜೇಗೌಡ ಮಾತನಾಡಿ, ನಾನೂ ಸಹ ಸೋಮಶೇಖರ್ ಅವರ ಗುಂಪಿನಲ್ಲಿದ್ದವನು. ಆದರೆ, ಅವರು ಧೈರ್ಯ ತೆಗೆದುಕೊಂಡು ಈಗಿನ ಸರ್ಕಾರ ರಚನೆಗೆ ಕಾರಣದಾವರು. ಅವರಿಗೆ ಸರ್ಕಾರಿ ಮಟ್ಟದಲ್ಲಿ ಯಾವ ಕೆಲಸವನ್ನಾದರೂ ಮಾಡುವ ಶಕ್ತಿಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.State Government - working -provide -more market – farmers- Minister -ST Somashekhar.

ಎಂವಿಕೆ ಡೈರಿ ಕಾರ್ಯನಿರ್ವಹಣೆಗೆ ತಡೆಕೊಟ್ಟಾಗ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಒಟ್ಟು 12.51 ಕೋಟಿ ರೂ ಸಂಪೂರ್ಣ ವೆಚ್ಚವನ್ನು ಸಹಕಾರ ಇಲಾಖೆ ವತಿಯಿಂದ ಸಚಿವರು ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಸ್ತ್ರೀಶಕ್ತಿ ಸಂಘಗಳಂತೆ ಆಶಾ ಕಾರ್ಯಕರ್ತೆಯರಿಗೂ ಸಹಕಾರಿ ಸಾಲ ನೀಡುವ ಬಗ್ಗೆ ಚಿಂತನೆಯನ್ನು ಹೊಂದಿದ್ದಾರೆ. 127 ವರ್ಷ ಇತಿಹಾಸ ಇರುವ ಮೈಸೂರು ಮೃಗಾಲಯವು ಕೊರೋನಾ ಸಂಕಷ್ಟಗಳ ಸಮಯದಲ್ಲಿ 3.45 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಯಾವುದೇ ಸರ್ಕಾರ ಇರಲಿ ನಮಗೆ ಅಭಿವೃದ್ಧಿ ಕೆಲಸ ಆಗಬೇಕು. ಈ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದು, ಬೇಕಾದ ಕೆಲಸದ ಬಗ್ಗೆ ಮನವಿ ಮಾಡಿ ಪಡೆಯುತ್ತೇನೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೂ ಸಹ ಸಹಕಾರ ನೀಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಇಂಚರಾ ಗೋವಿಂದರಾಜು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: State Government – working -provide -more market – farmers- Minister -ST Somashekhar.