ಘೋಷಿಸಿದ ಅರ್ಧದಷ್ಟೂ ಹಣ ನೀಡದ ಸರ್ಕಾರ!

ಬೆಂಗಳೂರು:ಆ-17: ರಾಜ್ಯ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಘೋಷಿಸಿದೆ. ಆದರೆ, ಬಿಡುಗಡೆ ಮಾಡಿದ್ದು ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಅದರಿಂದಾಗಿ ಬಿಬಿಎಂಪಿ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ.

ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಬಿಬಿಎಂಪಿಗೆ ಭರ್ಜರಿ ಕೊಡುಗೆ ಪ್ರಕಟಿಸಲಾಗಿತ್ತು. ಪ್ರತಿ ವರ್ಷ ರಾಜ್ಯ ಬಜೆಟ್​ನಲ್ಲಿ ಸಾವಿರಾರು ಕೋಟಿ ರೂ. ಘೋಷಣೆ ಮಾಡಲಾಗಿತ್ತು. 2016-17ರಿಂದ 2019-20ರವರೆಗಿನ ಬಜೆಟ್ ಸೇರಿ ಇನ್ನಿತರ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ 18 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದಲ್ಲದೆ, ಅಷ್ಟು ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ, ಅದರಲ್ಲಿ ಶೇ. 50 ಅನುದಾನವನ್ನೂ ಈವರೆಗೆ ಬಿಡುಗಡೆ ಮಾಡಿಲ್ಲ. ಆಮೂಲಕ ಬಿಬಿಎಂಪಿ ಮೂಗಿಗೆ ತುಪ್ಪ ಸವರುವ ಕೆಲಸವನ್ನಷ್ಟೇ ಮಾಡಲಾಗಿದೆ.

18 ಸಾವಿರ ಕೊಟಿ ರೂ.: ನಗರೋತ್ಥಾನ, ವಿಶೇಷ ಮೂಲ ಸೌಕರ್ಯ ಬಂಡವಾಳ ಬೆಂಬಲ ಯೋಜನೆ (ಎಸ್​ಐಪಿ), ಇಂದಿರಾ ಕ್ಯಾಂಟೀನ್, ನವ ಬೆಂಗಳೂರು ನಿರ್ಮಾಣ ಯೋಜನೆ, ರಾಜ ಕಾಲುವೆ ದುರಸ್ತಿ, ಕೆರೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಘೋಷಿಸಿತ್ತು. ಬಿಬಿಎಂಪಿ 18,238.37 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿತ್ತು. ಅಷ್ಟೂ ಮೊತ್ತದ ಕ್ರಿಯಾಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಅವೆಲ್ಲವುಗಳ ಜಾರಿಗೂ ಸೂಚಿಸಿತ್ತು.

7 ಸಾವಿರ ಕೋಟಿ ರೂ. ಬಿಡುಗಡೆ: ಬೃಹತ್ ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಿದಂತೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಈವರೆಗೆ ಎಲ್ಲ ಅನುದಾನಗಳು ಸೇರಿ 7,525.38 ಕೋಟಿ ರೂ. ಮಾತ್ರ.

ದಂಡವೂ ಬಿಬಿಎಂಪಿಯಿಂದಲೇ ಪಾವತಿ

ಬೆಳ್ಳಂದೂರು ಕೆರೆ ದುರಸ್ತಿಯಲ್ಲಿನ ನಿರ್ಲಕ್ಷ್ಯ ಸೇರಿ ಇನ್ನಿತರ ಕಾರಣಗಳಿಂದಾಗ ಎನ್​ಜಿಟಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ 550 ಕೋಟಿ ರೂ. ದಂಡ ವಿಧಿಸಿತ್ತು. ಆ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರದ ಸೂಚನೆಯಂತೆ ಬಿಬಿಎಂಪಿಯೇ ಪ್ರತ್ಯೇಕ ಖಾತೆಯಲ್ಲಿ (ಎಸ್ಕ್ರೋ ಅಕೌಂಟ್) ಆ ಮೊತ್ತ ಮೀಸಲಿಟ್ಟಿದೆ. ಆ ಮೊತ್ತವನ್ನು ಸರ್ಕಾರ ಬಿಬಿಎಂಪಿಗೆ ನೀಡಬೇಕಿದೆ.

ಆರ್ಥಿಕ ಸಂಕಷ್ಟದತ್ತ ಬಿಬಿಎಂಪಿ?

ಸರ್ಕಾರದ ಅನುಮೋದನೆ ಬಳಿಕ ಪಾಲಿಕೆ ಬಹುತೇಕ ಯೋಜನೆಗಳಿಗೆ ಚಾಲನೆ ನೀಡಿದೆ. ಎಸ್​ಐಪಿ ಅನುದಾನದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ, ನೂತನ ಬಿಜೆಪಿ ಸರ್ಕಾರ ಎಲ್ಲ ಯೋಜನೆಗಳಿಗೂ ತಡೆ ನೀಡಿದೆ. ಜತೆಗೆ ಖರ್ಚು, ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆಯೂ ಕೋರಿದೆ. ಬಿಎಸ್​ವೈ ಸರ್ಕಾರ ಹಿಂದಿನ ಯೋಜನೆಗಳನ್ನೆಲ್ಲ ರದ್ದು ಮಾಡಿದರೆ ಈಗಾಗಲೆ ಆರಂಭಗೊಂಡಿರುವ ಯೋಜನೆಗಳಿಗೆ ಬಿಬಿಎಂಪಿ ಆದಾಯದಿಂದಲೇ ಬಿಲ್ ಪಾವತಿಸ ಬೇಕಾಗುತ್ತದೆ. ಇದರಿಂದಾಗಿ ಬಿಬಿಎಂಪಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ.

ಹಿಂದಿನ ಸರ್ಕಾರಗಳು ಮನಬಂದಂತೆ ಅನುದಾನ ಘೋಷಿಸಿ ಕ್ರಿಯಾಯೋಜನೆಗೂ ಅನುಮೋದನೆ ನೀಡಿವೆ. ಆದರೆ, ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಿಲ್ಲ.

| ಪದ್ಮನಾಭರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ


ಕೃಪೆ:ವಿಜಯವಾಣಿ

ಘೋಷಿಸಿದ ಅರ್ಧದಷ್ಟೂ ಹಣ ನೀಡದ ಸರ್ಕಾರ!
state-government-did-not-release-even-50-of-allocated-funds-to-bbmp