ಶ್ರೀಲತಾ ಮನೋಹರ ಅವರ ‘ಪ್ರೀತಿಯೇ’, ‘ಮತ್ತೆ ಮಳೆ ಬಂದಾಗ’ ಕೃತಿಗಳ ಲೋಕಾರ್ಪಣೆ

ಮೈಸೂರು, ಜನವರಿ 17, 2021 (www.justkannada.in): ಸಂವಹನ ಪ್ರಕಾಶನ ಹೊರತಂದಿರುವ ಕವಯತ್ರಿ ಶ್ರೀಲತಾ ಮನೋಹರ ಅವರ ‘ಪ್ರೀತಿಯೇ’ ಕವನ ಸಂಕಲನ ಹಾಗೂ ‘ಮತ್ತೆ ಮಳೆ ಬಂದಾಗ’ ಕಥಾ ಸಂಕಲನವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎಸ್.ಕೆ.ಲೋಕಾಕ್ಷಿ ಎರಡೂ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

‘ಮತ್ತೆ ಮಳೆ ಬಂದಾಗ’ ಕಥಾ ಸಂಕಲನದ ಕುರಿತು ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಆರ್.ಚಂದ್ರೇಗೌಡ ಮಾತನಾಡಿದರೆ, ‘ಪ್ರೀತಿಯೇ’ ಕವನ ಸಂಕಲನ ಕುರಿತು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್.ನಿವೇದಿತಾ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಂಡವಪುರ ಬಿಇಒ ಎನ್.ಎ.ಮಲ್ಲೇಶ್ವರಿ, ಸಂವಹನ ಪ್ರಕಾಶನದ ಮಾಲೀಕ ಡಿ.ಎನ್.ಲೋಕಪ್ಪ, ಕವಯತ್ರಿ ಶ್ರೀಲತಾ ಮನೋಹರ ಇತರರು ಉಪಸ್ಥಿತರಿದ್ದರು.