ಪೊಲೀಸರಿಗೆ ‘ಮತ್ತೊಂದು ಕಣ್ಣಿನಂತಾದ’ ಸೋಷಿಯಲ್ ಮೀಡಿಯಾ!: ಎಡಿಜಿಪಿ ಅಲೋಕ್ ಕುಮಾರ್ ಧನ್ಯವಾದ

ಮೈಸೂರು, ಜುಲೈ 26, 2023 (www.justkannada.in): ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಹಲವು ವಿಷಯಗಳಲ್ಲಿ ನೆರವಾಗುತ್ತಿರುವ ಸೋಷಿಯಲ್ ಮೀಡಿಯಾಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಧನ್ಯವಾದ ಸಲ್ಲಿಸಿದರು.

ನಗರದಲ್ಲಿ ಮಾತನಾಡಿದ ಅವರು, ಹಿಂದೆಲ್ಲ ಪೊಲೀಸರನ್ನು ಮೂರನೇ ಕಣ್ಣು ಅನ್ನುತ್ತಿದ್ದರು. ಈಗ ಪೊಲೀಸರಿಗೆ ಸಾವಿರ ಕಣ್ಣುಗಳಿವೆ.  ಹುಡುಗರು ವ್ಹೀಲಿಂಗ್ ಮಾಡಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತಾರೆ. ಈಗ ಪೊಲೀಸರು ಸೋಷಿಯಲ್ ಮೀಡಿಯಾ ನೋಡುತ್ತಿರುತ್ತಾರೆ. ಅದನ್ನು ನೋಡಿ ಕೇಸ್ ಹಾಕುತ್ತಾರೆ. ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳ ಕ್ರೇಜ್‌ನಿಂದ ಪೊಲೀಸರಿಗೆ ಅನುಕೂಲ ಆಗಿದೆ ಎಂದು ಹೇಳಿದರು.

ಬಹುತೇಕರು ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಉದ್ದುದ್ದ ಪೋಸ್ಟ್ ಹಾಕುತ್ತಾರೆ, ಟ್ವೀಟ್ ಮಾಡುತ್ತಾರೆ. ಅಂಥವರೇ ಹೆಚ್ಚಾಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಮೊದಲೆಲ್ಲ ನಿಯಮ ಉಲ್ಲಂಘಿಸುವವರು ಪೊಲೀಸರ ವಾಹ‌ನ ನೋಡಿಕೊಳ್ಳುತ್ತಿದ್ದರು. ಈಗ ಕಾರುಗಳಲ್ಲೇ ಬೋರ್ಡ್ ಕ್ಯಾಮರಾಗಳು ಇರುತ್ತವೆ. ಜ‌ನ ಕೂಡ ರೂಲ್ಸ್ ಉಲ್ಲಂಘಿಸುವವರನ್ನು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸುತ್ತಿದ್ದಾರೆ. ಅವುಗಳ ಆಧಾರದ ಮೇಲೆಯೂ ಕೇಸ್ ಹಾಕುತ್ತಿದ್ದೇವೆ. ಪೊಲೀಸರ ಕಣ್ತಪ್ಪಿಸುವುದು ಸವಾರರ ಸಾಧನೆ ಆಗಬಾರದು.  ದಂಡ ಹಾಕುವುದಕ್ಕಿಂತ ಜೀವ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.