ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಅಪೂರ್ಣ, 25 ಅಪಘಾತ ವಲಯ: ಎಡಿಜಿಪಿ ಅಲೋಕ್ ಕುಮಾರ್

ಮೈಸೂರು, ಜುಲೈ 26, 2023 (www.justkannada.in): ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಸುಮಾರು 25 ಅಪಘಾತ ವಲಯಗಳು ಇವೆ. ಎಲ್ಲ ಕಡೆಗೆ ನಾನು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಾಮಗಾರಿಗಳು ಬಾಕಿ ಇವೆ.  ಸಿಸಿ ಕ್ಯಾಮರಾಗಳ ಅಳವಡಿಕೆ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ಮಾಡಿಲ್ಲ.  ಸಮಸ್ಯೆ ಆದಾಗ ಸರಿ ಮಾಡಿ ಅಂತ ನಮ್ಮನ್ನು ಕರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಹಲವಾರು ಸಮಸ್ಯೆಗಳಿವೆ. ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ.  ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ.  ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‌ಎಚ್‌ಎಐ ಅಧಿಕಾರಿಗಳ ಕೆಲಸ.  ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದೆ ಎಂದು ಅಲೋಕ್ ಕುಮಾರ್ ಹೇಳಿದರು.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿರ್ಬಂಧ ಕುರಿತಂತೆ ಎಡಿಜಿಪಿ ಅಲೋಕ್ ಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ ಹೆದ್ದಾರಿಯ ಅಪಘಾತದಲ್ಲಿ ಮೃತಪಟ್ಟ ಬಹುತೇಕರು ಬೈಕ್ ಸವಾರರು. 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆಟೋ ರಿಕ್ಷಾದಂತಹ ವಾಹಬಗಳ ವೇಗ ಇನ್ನೂ ಕಡಿಮೆ ಇರುತ್ತೆ. ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳನ್ನು ಬಿಡಲು ಸಾಧ್ಯವೇ ಇಲ್ಲ. ಇದೆಲ್ಲದಕ್ಕೂ ಎನ್‌ಎಚ್‌ಎಐ ಹಿಂದೆಯೇ ಅವಕಾಶ ಮಾಡಿಕೊಂಡಿದೆ. ಈ ಸಂಬಂಧ ಜುಲೈ 12ರಂದು ನೋಟಿಫಿಕೇಷನ್ ಕೂಡ ಆಗಿದೆ. ಆಗಸ್ಟ್ 1ರಿಂದ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಹೆದ್ದಾರಿಯಲ್ಲಿ ಗ್ರಿಲ್, ವಿದ್ಯುತ್ ಕಂಬಗಳ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಅಧಿಕಾರಿಗಳು ಒಂದೇ ಒಂದು ದೂರು ಕೊಟ್ಟಿಲ್ಲ. ತಡೆಗೋಡೆ ಕಬ್ಬಿಣ ಕಳ್ಳತನದಿಂದ ಹಸು, ಪಾದಚಾರಿಗಳು ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತ ಆಗುತ್ತಿವೆ ಅಂತ ಹೇಳುತ್ತಾರೆ.  ಆದರೆ ಪೊಲೀಸರಿಗೆ ದೂರು ಕೊಟ್ಟಿಲ್ಲ. ದರೋಡೆ ಪ್ರಕರಣಗಳ ವಿಚಾರವನ್ನೂ ನಮ್ಮ ಗಮನಕ್ಕೆ ತಂದಿಲ್ಲ.  ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು  ಅಲೋಕ್ ಕುಮಾರ್ ಹೇಳಿದರು.