ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಪರಿಪೂರ್ಣ ದೃಷ್ಟಿಯ ಬಜೆಟ್-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಫೆಬ್ರವರಿ,16,2024(www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ತಾರತಮ್ಯ ನಿವಾರಣೆಯ ಹೆಗ್ಗುರಿಗಳನ್ನುಳ್ಳ ಪರಿಪೂರ್ಣ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ನಮ್ಮ ತವರು ಜಿಲ್ಲೆಯಾದ ವಿಜಯಪುರದ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು, ಇಟ್ಟಂಗಿಹಾಳದ ಬಳಿ ಆಹಾರ ಪಾರ್ಕ್ ಮತ್ತು ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಘೋಷಿಸಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ ಎಂದು ಅವರು  ಹರ್ಷ ವ್ಯಕ್ತಪಡಿಸಿದ್ದಾರೆ.

ಇದು ಸಿದ್ದರಾಮಯ್ಯನವರ ದಾಖಲೆಯ ಬಜೆಟ್ ಆಗಿದೆ. ಭಾರತದ ಶಾಸಕಾಂಗ ಇತಿಹಾಸದಲ್ಲಿ 15 ಬಾರಿ ಬಜೆಟ್ ಮಂಡಿಸಿರುವವರು ತೀರಾ ಕಡಿಮೆ ಇದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ಶಕ್ತಿಶಾಲಿ ಕರ್ನಾಟಕ ನಿರ್ಮಾಣದ ತಮ್ಮ ದೂರದೃಷ್ಟಿಯನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.mb

ಕೃಷಿ, ರೈತರ ಸಬಲೀಕರಣ, ಕೈಗಾರಿಕೆ, ಮೂಲಸೌಕರ್ಯ, ಆಧುನಿಕ ಉದ್ಯಮಗಳಿಗೆ ಒತ್ತು, ಉದ್ಯೋಗಸೃಷ್ಟಿಯ ಕಡೆಗೆ ಗಮನ, ಶ್ರೀಶೈಲ, ಮಂತ್ರಾಲಯದಂತಹ ಪುಣ್ಯಕ್ಷೇತ್ರಗಳಲ್ಲಿ ಸೌಲಭ್ಯ ಹೆಚ್ಚಳ, ಮೀನುಗಾರಿಕೆಗೆ ಆದ್ಯತೆ, ಆರೋಗ್ಯ ಕ್ಷೇತ್ರದ ಉನ್ನತೀಕರಣ ಇವೆಲ್ಲವುಗಳಿಗೂ ಅವರು ಸಮಾನ ಒತ್ತು ನೀಡುವುದರ ಮೂಲಕ ಇಡೀ ಕರ್ನಾಟಕದ ಅಭಿವೃದ್ಧಿಗೆ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇವುಗಳು ಮುಂಬರುವ ದಿನಗಳಲ್ಲಿ ಫಲ ಕೊಡಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಜ್ಯದಲ್ಲಿ ರಾಜಸ್ವ ಸಂಗ್ರಹ ಹೆಚ್ಚಳ ಜೊತೆಯಲ್ಲೇ ದುರ್ಬಲರನ್ನು ಮೇಲಕ್ಕೆತ್ತುವ ಕಡೆಗೂ ಗಮನ ಕೊಡಬೇಕಾದ ತುರ್ತಿದೆ. ಆದರೆ, ನಾವು ಜಿಎಸ್ಟಿ ಸಂಗ್ರಹಣೆಯಲ್ಲಿ ದೇಶಕ್ಕೇ ಎರಡನೇ ಸ್ಥಾನದಲ್ಲಿದ್ದರೂ ಕೇಂದ್ರದ ಬಿಜೆಪಿ ಸರಕಾರವು ಅದರ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ. ಅದರ ಗಮನವೆಲ್ಲ ಬರೀ ಉತ್ತರ ಭಾರತದ ರಾಜ್ಯಗಳ ಕಡೆಗಿದೆ. ಇಂತಹ ಮಲತಾಯಿ ಧೋರಣೆಯ ವಿರುದ್ಧ ಸಿದ್ದರಾಮಯ್ಯನವರು ಬಜೆಟ್ಟಿನಲ್ಲೇ ಪ್ರಸ್ತಾಪಿಸಿರುವುದು ರಾಜ್ಯದ ಹಕ್ಕುಗಳ ಸಂರಕ್ಷಣೆ ಕುರಿತು ನಮಗಿರುವ ಕಳಕಳಿಯನ್ನು ತೋರಿಸುತ್ತದೆ ಎಂದು ಪಾಟೀಲ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಜಾಲದ ಬೆಳವಣಿಗೆಗೆ ನಿಕಟ ಸಂಬಂಧವಿದೆ. ಸಿದ್ದರಾಮಯ್ಯನವರು ಇದನ್ನು ಅರ್ಥ ಮಾಡಿಕೊಂಡಿದ್ದು, `ಕರ್ನಾಟಕ ಮೂಲಸೌಲಭ್ಯ ಯೋಜನೆ ಅಭಿವೃದ್ಧಿ ನಿಧಿ’ಯಡಿ ಕಾರ್ಯಸಾಧ್ಯತಾ ವರದಿಗಳನ್ನು ಸಿದ್ಧಪಡಿಸಲು ಹೊಸ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಅದರಲ್ಲೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ನಗರದಲ್ಲಿ ವಿಶ್ವ ದರ್ಜೆಯ ಉತ್ಕೃಷ್ಟ ಮೂಲಸೌಕರ್ಯ ಅಭಿವೃದ್ಧಿಪಡಿಸಲು ನಮ್ಮ ಸರಕಾರ ಹೊಂದಿರುವ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯನವರು ಬಜೆಟ್ಟಿನಲ್ಲಿ ಬಿಂಬಿಸಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಮತ್ತಷ್ಟು ಅತ್ಯಾಧುನಿಕ ಉದ್ಯಮಗಳು ಬರಲು ಸಹಾಯವಾಗಲಿದೆ ಎಂದು ಸಚಿವರು ಬಣ್ಣಿಸಿದ್ದಾರೆ.

ಒಟ್ಟಿನಲ್ಲಿ ಇದೊಂದು ರಚನಾತ್ಮಕ ಬಜೆಟ್ ಆಗಿದ್ದು, ಇದರಲ್ಲಿ ಅಭಿವೃದ್ಧಿಯ ಸಮಗ್ರ ದೃಷ್ಟಿ ಅಡಗಿದೆ. ಇದರಿಂದಾಗಿ ನಿಜವಾದ ಅರ್ಥದಲ್ಲಿ ನವಕರ್ನಾಟಕದ ನಿರ್ಮಾಣ ಆಗಲಿದೆ. ಕಾಂಗ್ರೆಸ್ ಸರಕಾರವು ಬಿಜೆಪಿಯಂತೆ ಜಾತಿ-ಧರ್ಮಗಳ ಹೆಸರಿನಲ್ಲಿ ತಾರತಮ್ಯ ಮಾಡುವುದರಲ್ಲಿ ನಂಬಿಕೆ ಹೊಂದಿಲ್ಲ. ಬದಲಿಗೆ ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ವಿಕಸಿತ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ ಎಂದು  ಸಚಿವ ಎಂ.ಬಿ ಪಾಟೀಲ್ ಅವರು ವ್ಯಾಖ್ಯಾನಿಸಿದ್ದಾರೆ.

Key words: Social Justice- Economic Development- Perfect –Vision- Budget-Minister -MB Patil