ಸರ್ಕಾರಿ ಭೂ ಒತ್ತುವರಿ ತೆರವಿಗೆ ಪ್ರತ್ಯೇಕ ಕೋಶ ರಚನೆಗೆ ಚಿಂತನೆ- ಸಚಿವ ಕೃಷ್ಣ ಬೈರೇಗೌಡ.

ಬೆಳಗಾವಿ ಡಿಸೆಂಬರ್ 06,2023(www.justkannada.in): ಖಾಸಗಿಯವರಿಂದ ಒತ್ತುವರಿಯಾಗಿರುವ ಸರ್ಕಾರಿ ಭೂಮಿಗಳನ್ನು ತೆರವುಗೊಳಿಸಿ ಮತ್ತೆ ಸರ್ಕಾರದ ಸುಪರ್ದಿಗೆ ಪಡೆಯಲು ಪ್ರತ್ಯೇಕ ಕೋಶ ರಚಿಸುವ ಚಿಂತನೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನ ಪರಿಷತ್ ನಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಒತ್ತುವರಿ ಕುರಿತಂತೆ ಶಾಸಕರಾದ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣಭೈರೇಗೌಡ, “ಒತ್ತುವರಿಯಾಗಿರುವ ಭೂ ತೆರವಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಳೆದ ಆರು ತಿಂಗಳಲ್ಲಿ ನೂರಾರು ಕೋಟಿ ಮೌಲ್ಯದ ಸರ್ಕಾರ ಭೂ ಒತ್ತುವರಿಯನ್ನು ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ತೆರವಿಗೆ ಪ್ರತ್ಯೇಕ ಕೋಶ ರಚಿಸಲಾಗುವುದು, ಅಲ್ಲದೆ, ಸರ್ಕಾರಿ ಆಸ್ತಿಗಳನ್ನು ರಕ್ಷಿಸಲಾಗುವುದು” ಎಂದರು.

ಇದೇ ಸಂದರ್ಭದಲ್ಲಿ ಮುಜರಾಯಿ-ವಕ್ಫ್ ಆಸ್ತಿಗಳ ಕಬಳಿಕೆ ಬಗ್ಗೆಯೂ ಸದನದಲ್ಲಿ ಸ್ಪಷ್ಟಪಡಿಸಿದ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಮುಜರಾಯಿ ಹಾಗೂ ವಕ್ಫ್ ಆಸ್ತಿಗಳು ಅಧಿಕ ಸಂಖ್ಯೆಯಲ್ಲಿದೆ. ಹೀಗಾಗಿ ಈ ಹಿಂದೆಯೇ ಆಸ್ತಿಗಳನ್ನು ಸರ್ವೇ ನಡೆಸಿ ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ರೈತರ ಸಮಸ್ಯೆಯೇ ಹೆಚ್ಚಿರುವ ಕಾರಣ ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಮೊದಲ ಆದ್ಯತೆ” ಎಂದರು.

ಮುಂದುವರೆದು, “ಪ್ರಸ್ತುತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲಿ ಮುಜರಾಯಿ-ವಕ್ಫ್ ಆಸ್ತಿಗಳನ್ನು ಸರ್ವೇ ನಡೆಸಿ ಗಡಿ ಗುರುತಿಸಿ ರಕ್ಷಿಸಲಾಗುವುದು. ಅಲ್ಲದೆ, ಈ ಆಸ್ತಿಗಳನ್ನು  ಡಿಜಿಟಲ್ ಡೇಟಾಬೇಸ್ ನಿರ್ವಹಿಸುವಂತೆಯೂ ಸರ್ಕಾರದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದರು.

Key words:   separate cell – clearance – government land- encroachment- Minister- Krishna Byregowda.