ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ಆಗ್ರಹ: ವಿಧಾನ ಪರಿಷತ್ ಕಲಾಪ ಗುರುವಾರಕ್ಕೆ ಮುಂದೂಡಿಕೆ…

ಬೆಂಗಳೂರು,ಜು,16,2019(www.justkannada.in):  ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದರು.

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾಯಿತು. ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.  ಈ ವೇಳೆ ಪ್ರಶ್ನೋತ್ತರಕ್ಕೆ ಅವಕಾಶ ಕೊಡುವಂತೆ ಸಭಾಪತಿ ಬಿಜೆಪಿಗೆ ಮನವಿ ಮಾಡಿದರು.

ಸಭಾಪತಿ ಮನವಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು  ಸರ್ಕಾರಕ್ಕೆ ಬಹುಮತ ಇಲ್ಲ. ಪ್ರಶ್ನೋತ್ತರಕ್ಕೆ ಉತ್ತರ ಕೊಡೋರು ಯಾರು..? ಸಿಎಂ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪರಿಷತ್ ವಿಪಕ್ಷನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಆಪರೇಷನ್ ಮಾಡ್ತಿದೆ ಅಂತ ದೋಸ್ತಿ ಪಕ್ಷಗಳು ಆರೊಪ ಮಾಡುತ್ತಿವೆ. ಸರ್ಕಾರ ನಾಟಕ ಮಾಡ್ತಿದೆ. ಸರ್ಕಾರ ಮನೆಗೆ ಹೋಗಲಿ ಎಂದು ಒತ್ತಾಯಿಸಿದರು.

ಬಿಜೆಪಿ ಪ್ರತಿಭಟನೆ ಹಿನ್ನಲೆ ಕಲಾಪ 15 ನಿಮಿಷ ಮುಂದೂಡಿಕೆ ಮಾಡಲಾಯಿತು. ಇದಾದ ಬಳಿಕ ಮತ್ತೆ ಕಲಾಪ ಆರಂಭವಾಗಿ ಕಲಾಪವನ್ನ ಗುರುವಾರ ಬೆ.11.30ಕ್ಕೆ  ಮುಂದೂಡಿಕೆ ಮಾಡಲಾಯಿತು.

Key words: BJP -demands -resignation -CM HD Kumaraswamy- Legislative Council