Wednesday, August 5, 2026

BDA Apartments

Home Front Page ಶಾಲಾ ಸಂಪರ್ಕ ಸೇತುಯೋಜನೆ- ವಿಡಿಯೋ ಸಂವಾದದ ಮೂಲಕ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಪ್ರಗತಿ ಪರಿಶೀಲನೆ…

ಶಾಲಾ ಸಂಪರ್ಕ ಸೇತುಯೋಜನೆ- ವಿಡಿಯೋ ಸಂವಾದದ ಮೂಲಕ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಪ್ರಗತಿ ಪರಿಶೀಲನೆ…

ಬೆಂಗಳೂರು , ಜೂನ್ ,11,2019(www.justkannada.in):  ಲೋಕೋಪಯೋಗಿ ಇಲಾಖೆಯ ಸಮಗ್ರ ಅಭಿವೃದ್ಧಿಯ ಕುರಿತು ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯ ಅನುಷ್ಠಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು, ನಿರ್ಮಾಣಗೊಂಡ ಸೇತುವೆಯ ಬಳಿಯಿಂದಲೇ ಸ್ಥಳೀಯ ಅಧಿಕಾರಿಗಳು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿ ಕಾಮಗಾರಿ ಪೂರ್ಣ ಗೊಂಡಿರುವ ಬಗ್ಗೆ ವಿವರಿಸಿದರು.

ಶಾಲಾ ಸಂಪರ್ಕ ಸೇತು ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು  2-3 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮಲೆನಾಡ ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನು ಕಾಲುಸಂಕ ದಾಟುವ ಸಂದರ್ಭದಲ್ಲಿ ಅಸುನೀಗಿದ ಸುದ್ದಿಯನ್ನು ಗಮನಿಸಿ,  ಸಿಎಂ ಜಾರಿಗೆ ತಂದಿರುವ ಶಾಲಾ ಸಂಪರ್ಕ ಸೇತು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ಬಂದಿದೆ. ನದಿ, ಹಳ್ಳ,ತೊರೆಯನ್ನು ದಾಟಲು ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಕಾಲುಸಂಕ ಸೇತುವೆಗಳನ್ನು ಬದಲಾಯಿಸಿ ಶಾಶ್ವತವಾದ ಕಿರುಸೇತುವೆಗಳನ್ನು ನಿರ್ಮಿಸುವಂತೆ ಸೂಚಿಸಿ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿತ್ತು.

ಪುತ್ತೂರು ತಾಲ್ಲೂಕಿನ   ಕುಂತೂರು ಮಜಲು , ಅರ್ಬಿ ಗ್ರಾಮ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳು ಗ್ರಾಮ ಪಂಚಾಯತಿಯ ದೋಡ್ಲಿಮನೆ ಹಳ್ಳ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಬೆಳ್ಳಿಮಡಿಕೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಕಾಲುಸಂಕಗಳ ಬದಲಿಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ವಿದ್ಯಾರ್ಥಿನಿಯ ಅಹವಾಲು : ತೀರ್ಥಹಳ್ಳಿಯ ತಮ್ಮ ಶಾಲೆಗೆ ವಿದ್ಯಾರ್ಥಿಗಳು ದೂರದಿಂದ ಪ್ರಯಾಣ ಮಾಡಿ ಬರುವುದರಿಂದ ಸಾರಿಗೆ ಹಾಗೂ ವಸತಿ ಸೌಲಭ್ಯವನ್ನು ಒದಗಿಸುವಂತೆ ವಿದ್ಯಾರ್ಥಿನಿಯೊಬ್ಬರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಹಾಗೂ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವನ್ನು ತಮ್ಮ ಶಾಲೆಯಲ್ಲಿಯೂ ಮಾಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುವುದಾಗಿ ವಿದ್ಯಾರ್ಥಿನಿಗೆ ಭರವಸೆ ಇತ್ತರು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ರಸ್ತೆ ಅಭಿವೃದ್ಧಿಕಾರ್ಯ ಪ್ರಗತಿಯ್ಲಲಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸ್ಥಳೀಯರು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಕಳೆದ ನವೆಂಬರ್ನಲ್ಲಿ ಕನಗನಮರಡಿ ಗ್ರಾಮದಲ್ಲಿ ಭೀಕರ  ಬಸ್ ದುರಂತದಿಂದಾಗಿ ಹಲವಾರು ಜನಅಸು ನೀಗಿದ್ದರು.

‘ಶಾಲಾ ಸಂಪರ್ಕ ಸೇತು’ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಇದರಿಂದ ಬಹಳಅನುಕೂಲವಾಗಿದೆ ಎಂದು ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು . ಈ ಸಂದರ್ಭದಲ್ಲಿ ಹಾಜರಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಶಾಲಾ ಸಂಪರ್ಕ ಸೇತು ಯೋಜನೆಯ ಪ್ರಗತಿಯ ವಿವರಗಳನ್ನು ಒದಗಿಸಿದರು.

Key words: School -Connection- Planning- Progress- inspection – CM HD Kumaraswamy