ಮೈಸೂರು, SEP.20,2026: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕಾಗಿ ಪ್ರತಿದಿನವೂ ಮುಂಚೂಣಿಯಲ್ಲಿ ದುಡಿಯುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಮೈಸೂರು ಮಹಾನಗರ ಪಾಲಿಕೆ ಮತ್ತು ಮಣಿಪಾಲ್ ಆಸ್ಪತ್ರೆ ಕೈಜೋಡಿಸಿವೆ.
ಪೌರಕಾರ್ಮಿಕರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ಉದ್ದೇಶದಿಂದ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಹಾಗೂ ಆರೋಗ್ಯ ಸಂರಕ್ಷಣೆಯ ಕುರಿತು ಮಾರ್ಗದರ್ಶನ ನೀಡಲಾಯಿತು.

ನಮ್ಮ ಮನೆ, ನಮ್ಮ ರಸ್ತೆ, ನಮ್ಮ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನು ಅಧಿಕಾರಿಗಳು ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಎಂ.ಕೆ., ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಂದೀಪ್ ಪಾಟೀಲ್, ವಲಯ–7ರ ಸಹಾಯಕ ಆಯುಕ್ತರಾದ ರತ್ನಾಂಬಿಕೆ, ಪರಿಸರ ಅಭಿಯಂತರರಾದ ಚಿನ್ಮಯಿ, ಆರೋಗ್ಯ ನಿರೀಕ್ಷಕರಾದ ನಮ್ರತಾ ಮತ್ತು ದರ್ಶನ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಣಿಪಾಲ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.
ನಗರದ ಆರೋಗ್ಯಕ್ಕಾಗಿ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದುಡಿಯುವ ಪೌರಕಾರ್ಮಿಕರ ಆರೋಗ್ಯ ಕಾಳಜಿಗೆ ಸ್ಪಂದಿಸಿದ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿಗೆ ಮೈಸೂರು ಮಹಾನಗರ ಪಾಲಿಕೆ ಅಭಿನಂದನೆ ಸಲ್ಲಿಸಿತು.
ನಗರವನ್ನು ಸ್ವಚ್ಛವಾಗಿಡುವವರ ಆರೋಗ್ಯವೂ ನಮ್ಮೆಲ್ಲರ ಹೊಣೆ ಎಂಬ ಮಾನವೀಯ ಸಂದೇಶವನ್ನು ಈ ಶಿಬಿರ ಸಾರಿತು.








