Sunday, September 27, 2026

BDA Apartments

ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ, ನಡವಳಿಕೆಯ ಏಕರೂಪತೆಗೆ ಚರ್ಚೆ: ಸತೀಶ್ ಮಹನ...
Home Front Page ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ, ನಡವಳಿಕೆಯ ಏಕರೂಪತೆಗೆ ಚರ್ಚೆ: ಸತೀಶ್ ಮಹನಾ

ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ, ನಡವಳಿಕೆಯ ಏಕರೂಪತೆಗೆ ಚರ್ಚೆ: ಸತೀಶ್ ಮಹನಾ

ಮೈಸೂರು ,ಮೇ,12,2026 (www.justkannada.in): ಎಲ್ಲಾ ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ ಹಾಗೂ ನಡವಳಿಕೆಯ ಏಕರೂಪತೆ ತರುವ ನಿಟ್ಟಿನಲ್ಲಿ ಆರು ರಾಜ್ಯಗಳ ವಿಧಾನಸಭೆಯ ಸಭಾಧ್ಯಕ್ಷರುಗಳನ್ನೊಳಗೊಂಡ ಸಮಿತಿಯನ್ನು ಲೋಕಸಭೆಯ ಸಭಾಧ್ಯಕ್ಷರು ರಚಿಸಿರುತ್ತಾರೆ‌. ಸಮಿತಿಯು ವಿವಿಧ ರಾಜ್ಯಗಳ ಸಭಾಧ್ಯಕ್ಷರುಗಳೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಲಿದೆ ಎಂದು ಸಮಿತಿಯ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶದ ವಿಧಾನಸಭೆಯ ಸಭಾಧ್ಯಕ್ಷರಾದ ಸತೀಶ್ ಮಹನಾ ಅವರು ತಿಳಿಸಿದರು.

ಇಂದು ಸೈಲೆಂಟ್ ಶೋರ್ಸ್ ನಲ್ಲಿ ಸಮಿತಿಯ ಪ್ರಥಮ‌ ಸಭೆ  ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸತೀಶ್ ಮಹನಾ ಮಾತನಾಡಿದರು. ಸದರಿ ಸಮಿತಿಯಲ್ಲಿ ನಾಗಲ್ಯಾಂಡ್, ಹಿಮಾಚಲ್ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿಯ ವಿಧಾನಸಭಾ ಸಭಾಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿರುತ್ತಾರೆ ಎಂದರು.

ಸಮಿತಿಯು ಸಭೆ ನಡೆಸಿ ಎಲ್ಲಾ ರಾಜ್ಯಗಳ ವಿಧಾನಮಂಡಲದಲ್ಲಿರುವ ನೀತಿ ನಿಯಮಗಳು ಹಾಗೂ ನಿಯಮಗಳನ್ನು ಉತ್ತಮಗೊಳಿಸುವ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಿದೆ. ಇದರೊಂದಿಗೆ ಬೇರೆ ರಾಜ್ಯಗಳ ಸಭಾಧ್ಯಕ್ಷರು ನೀಡುವ ಸಲಹೆಗಳನ್ನು ಸಹ ಪಡೆಯಲಾಗುವುದು ಎಂದರು.

ಸಮಿತಿಯು ವರದಿಯನ್ನು ಸಿದ್ಧಪಡಿಸಿ ಲೋಕಸಭಾಧ್ಯಕ್ಷರಿಗೆ ಸಲ್ಲಿಸಲಿದೆ. ಇಂದು ಪ್ರಥಮ ಸಭೆ ನಡೆಸಲಾಗಿದ್ದು, ಮುಂದಿನ ಸಭೆಯನ್ನು 1.5 ತಿಂಗಳೊಳಗಾಗಿ ದೆಹಲಿಯಲ್ಲಿ ನಡೆಸಲಾಗುವುದು. ಸಮಿತಿಗೆ ವರದಿ ನೀಡಲು 6 ತಿಂಗಳ ಕಲಾವಕಾಶ ನೀಡಲಾಗಿದೆ ಎಂದರು.

40 ವರ್ಷಗಳ ಹಿಂದೆ ವಿಧಾನ ಮಂಡಲದ ನೀತಿ ನಿಯಮಗಳನ್ನು ರೂಪಿಸಲಾಗಿತ್ತು. ಈ ಹಿಂದೆ 25 ರಿಂದ 30 ವರ್ಷಗಳಿಗೆ ತಲೆಮಾರು ಬದಲಾವಣೆಯಾಗುತ್ತಿತ್ತು, ಇಂದು 5 ವರ್ಷಗಳಲ್ಲಿ ತಲೆಮಾರು ಬದಲಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಧಾನಮಂಡಲದಲ್ಲಿ ಎಲ್ಲಾ ರಾಜ್ಯಗಳ ಉತ್ತಮ ಸಲಹೆಗಳನ್ನು ಪಡೆದು ಏಕರೂಪತೆ ತರುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ.ತಂತ್ರಜ್ಞಾನ, ಮೂಲಸೌಕರ್ಯ, ಹಣಕಾಸು ವ್ಯವಹಾರ, ಸೇರಿದಂತೆ ವಿವಿಧ ವ್ಯವಸ್ಥೆಗಳು ಬದಲಾವಣೆ ಹಾಗೂ ಸಾರ್ವಜನಿಕರ ಶ್ರೇಯೋಭಿವೃದ್ಧಿಯನ್ನು ಮುಖ್ಯವಾಗಿ ಇರಿಸಿಕೊಂಡು ಸಮಿತಿ ಚರ್ಚೆ ನಡೆಸುತ್ತಿದೆ ಎಂದರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ  ಯು.ಟಿ ಖಾದರ್ ಅವರು ಮಾತನಾಡಿ 1891 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ಜನಪ್ರತಿನಿಧಿ ಸಭೆ ನಡೆಸಿದ್ದರು. ಇದರ ನೆನಪಿಗಾಗಿ ಸಮಿತಿಯು ಪ್ರಥಮ ಸಭೆಯನ್ನು ಮೈಸೂರಿನಲ್ಲಿ ನಡೆಸಲಾಗಿದೆ ಎಂದರು.ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ jk02

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ  ನಾಗಾಲ್ಯಾಂಡ್ ವಿಧಾನಸಭೆಯ ಸಭಾಧ್ಯಕ್ಷ ಶ್ಯಾರಿಗ್ಯಾನ್ ಲಾಂಗ್ಕುಮೇರ್, ಹಿಮಾಚಲ ಪ್ರದೇಶದ ವಿಧಾನಸಭೆಯ ಸಭಾಧ್ಯಕ್ಷ ಕುಲ್ ದೀಪ್ ಸಿಂಗ್ ಪತಾನೀಯ  ಹಾಗೂ ದೆಹಲಿ  ವಿಧಾನಸಭೆಯ ಸಭಾಧ್ಯಕ್ಷ ವಿಜೇಂದರ್ ಗುಪ್ತ ಅವರುಗಳು ಉಪಸ್ಥಿತರಿದ್ದರು.

Key words: Discussion, uniformity,  procedure, state assemblies, Sathish Mahana